Friday, April 4, 2014

ಚೌಪದಿಗಳು

2008  --  7 . ಬನ್ನೇರುಘಟ್ಟ Time pass  !!  
ಹಿತ್ತಲಲಿ ನಾ ಕುಳಿತು ಎಣಿಸಿದ್ದೆ ಸೀಬೆಫಲ, 
ಹತ್ತು ದಿನಗಳ ಬಳಿಕ ಕೀಳಬಹುದೆಂದು.
ಅಳಿಲು ಬರದಿರಲೆಂದು ಚೀಲಗಳ ನಾ ಕಟ್ಟೆ, 
ಟೊಂಗೆ ಮುರಿದಾ ಮಂಗಕುಪಹಾರವಾಯ್ತಿಂದು !! 

2013  --  8.  ಶ್ವಾನ - ಶಾಪ 
ಎಲ್ಲರೊಲುಮೆಯ ಅತಿಥಿ ಬಂದಿತ್ತು ಶ್ವಾನ 
ಪುಟಿಪುಟಿದು ಓಡುತ್ತ ಬಾಲವನ್ನಾಡಿಸುತ 
ದೊಡ್ಡದಾಗುತ್ತಲೇ ಸಿಕ್ಕದ್ದು ಕಚ್ಚಿರಲು 
ಶ್ವಾನವಿತ್ತವಗೆ ನಾ ಹಾಕಿದೆನು ಶಾಪ ! 

ಚೌಪದಿಗಳು.....


2009 --  4 . ಬಟೂರೆ
ಪಕ್ಕದಾ ತಾಟಿನಲಿ ಪೂರಿ ಗಾತ್ರವ ಕಂಡು , 
ತರಲು ಹೇಳಿದೆ  ನಾ , ಒಂದು ಪ್ಲೇಟ್ ಪೂರಿ . 
ಹತ್ತು ನಿಮಿಷವ ಕಳೆದು , ಅಂಗೈ ಗಾತ್ರದಿ ಬರಲು 
ಎಣಿಸಿದ್ದೆ ತಪ್ಪಾಯ್ತು,  ಪಕ್ಕದ್ದು ಬಟೂರೆ    !! 

2008 --  5 . ಚೆನ್ನ ......... 
ಹೊಸತು ಹೊಸತೀ ಮನೆಯು ಮನೆಯ ಒಡೆಯಗೆ ಚೆನ್ನ 
ಮನೆಯನಾಳುವ ಪರಿಯು ಅವನ ಮಡದಿಗೆ ಚೆನ್ನ 
ಆರಾರಿಗಾವಾಗ ಏನೇನು ಚೆನ್ನವೋ ?
ದೈವ ಪೊರೆಯಲಿ ನಿಮ್ಮ ನಮಗದುವೆ ಚೆನ್ನ ! 

2010. --  6. ಮಥುರಾಸೇವೆ 
ತೀರ್ಥಯಾತ್ರೆಯ ಸಮಯ ಬಸವಳಿದು ನಾನಂದು 
ಕೃಷ್ಣನಾಲಯದೆದುರು ಮರದ ಬಳಿ ಕುಳಿತಿರಲು 
ಭಕ್ತಾದಿಗಳ ಗುಂಪು ಮೆಟ್ಟು ಬಿಚ್ಚಿದರಲ್ಲೇ 
ಕಾಯುತಿದ್ದುದೆ ಸೇವೆ , ಹೀಗಿತ್ತು ಸ್ಥಳಮಹಿಮೆ ... !! 

Tuesday, April 1, 2014

2006 - 3. ಹರಕೆ

 ಸ್ವಾತಿಯಾ ಮಳೆಹನಿಯು ನಿನ್ನ ಪಡೆದಪ್ಪ, 
ಕಡಲಿನಾಳದ ಚಿಪ್ಪು ನಿನ್ನ ಹಡೆದವ್ವ ,
ನೀನು ನಂಬಿದ ದೈವ , ನಿನಗೆ ಮುದ ತರಲಿ 
ನಾವು ಕೋರುವ ಹರಕೆ ನಿನಗೆ ಶುಭ ತರಲಿ !