Saturday, July 18, 2015

Iraq - Iran War ! Face to Face !! 1980 ( ಅನುಭವ )

Iraq - Iran War ! Face to Face !! 1980 ( ಅನುಭವ )

ನಾನು ಬಾಗ್ದಾದ್ ಗೆ ಹೋದಮೇಲೆ ಅಲ್ಲಿನ ಜನಜೀವನ, ಸಂಖ್ಯೆಗಳು, ಚಲಾವಣೆಗೆ ಬೇಕಾದ ನೋಟುನಾಣ್ಯಗಳ ಪರಿಚಯ, ತರಕಾರಿ ಹಣ್ಣು ಮಳಿಗೆ ಸಾಮಾನುಗಳ ಹೆಸರು, ಸುತ್ತ ಮುತ್ತಲಿರುವ ಅಂಗಡಿ ಮುಗ್ಗಟ್ಟುಗಳ ಮಾರ್ಗ, ಇವುಗಳನ್ನೆಲ್ಲಾ ತಿಳಿದುಕೊಳ್ಳುವ ವೇಳೆಗೆ ಸುಮಾರು ದಿನ ಹಿಡಿಯಿತು .
ಈ ಮಧ್ಯೆ ಎರಡು ಬಾರಿ ಮಕ್ಕಳು ಬಂದಿದ್ದು ಬಾಗ್ದಾದ್ ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿದ್ದೂ ಆಯ್ತು. ಹಬಾನಿಯಾ ಲೇಕ್, ತರ್ತರ್ ಲೇಕ್, ಸಮರ್ರ, ಕರ್ಬಲ ಮಾಸ್ಕ್, ಲುನಾರ್ ಪಾರ್ಕ್, ಮನ್ಸೌರ್ ಮಾರ್ಕೆಟ್, ಆಫ್ರಿಕನ್ ಸ್ಟೋರ್, ಶಾರ್ಜಾ ಮಾರ್ಕೆಟ್, ಟೈಗ್ರಿಸ್ ರಿವರ್, ಮಸಬ ಪಾರ್ಕ್, ಮುಖ್ಯವಾಗಿ - ಬ್ಯಾಬಿಲೋನ್ !  
ಭಾಷೆ ಗೊತ್ತಿಲ್ಲದ ಸ್ಥಳದಲ್ಲಿ ಎಡವಟ್ಟಾಗುತ್ತಿದ್ದುದೂ ಉಂಟು. ಹಾಗೊಮ್ಮೆ ತರಕಾರಿ ತರಲು ಹೋದಾಗ ಕಣ್ಣಿಗೆ ಕಂಡ ಕಾಮಕಸ್ತೂರಿ ಸೊಪ್ಪನ್ನು ವಿಚಾರಿಸಿದೆ. ಈ ಸೊಪ್ಪನ್ನು ನಮ್ಮ ಕಡೆ ಹೂವಿನ ಮಧ್ಯೆ ಸೇರಿಸಿ ಕಟ್ಟುವುದು ಸಹಜ. ಆದರೆ ಇಲ್ಲಿ ? ಅದನ್ನು ಕಂತೆ ಕಂತೆಯಾಗಿ ಪೇರಿಸಿ ಇಟ್ಟಿದ್ದರು. ವಿಚಾರಿಸಿದಾಗ ಆ ವ್ಯಾಪಾರಿ ಗೂಟಕ್ಕೆ ಕಟ್ಟಿದ ಕುರಿಯೊಂದನ್ನು ತೋರಿಸಿದ. ಏನೂ ಅರ್ಥವಾಗದೆ ನಿಂತಾಗ ಕುರಿಯ ಮುಂದೆ ಒಂದು ಕಂತೆ ಸೊಪ್ಪನ್ನು  ಹಿಡಿದ. ಕುರಿಯೇನೋ ಅಷ್ಟನ್ನೂ ಖಾಲಿ ಮಾಡಿತ್ತು. ನಾವು ಕೇಳಿದ್ದೇನು ? ಇವನು ಮಾಡಿದ್ದೇನು ? ತುಂಬಾ ಹೊತ್ತಿನ ನಂತರ ಅದು ಕುರಿಗಳಿಗೆ ಹಾಕುವ ಸೊಪ್ಪೆಂದು ತಿಳಿಯಿತು. ಅಷ್ಟಾದರೂ ಹೇಳಿದನಲ್ಲಾ ಎಂದು ಮುಂದಿನ ಅಂಗಡಿಗೆ ಹೊರಟಿದ್ದೆ. ನಮ್ಮವರು ಬಿಡಬೇಕಲ್ಲ ! ತಿಂದರೆ ಏನಾಗುತ್ತೆ ? ಟ್ರೈ ಮಾಡಿ ನೋಡು ಎನ್ನುತ್ತಲೇ ಖರೀದಿಸಿಯಾಗಿತ್ತು. ತಂದು ಅಯ್ಯಂಗಾರರ ಕೊಳಂಬು ಮಾಡಿಯಾಯ್ತು . ತಿಂದವರು ಅವರೊಬ್ಬರೇ ಎಂದು ಬೇರೆಯಾಗಿ ಹೇಳಬೇಕಿಲ್ಲ. ತೊಂದರೆಯೇನೂ ಆಗಲಿಲ್ಲ . ಅವರು ಪ್ರಕೃತಿ ಚಿಕಿತ್ಸೆ ಆಯುರ್ವೇದದಲ್ಲಿ ನಂಬಿಕೆ ಇಟ್ಟವರು. ಹಾಗೆಂದು ಅವರ ಊಟ ಕೂಡಾ ಅದರಂತೆಯೇ. ಬೆಳಗಿನ ಆರಕ್ಕೆ ಮನೆ ಬಿಟ್ಟರೆ ಸಂಜೆ ಆರಕ್ಕೆ ವಾಪಸ್. ಅವರ ದಿನದ ಊಟ ಎಂದರೆ ಒಂದು ಕಪ್ ಮೊಸರು, ಕಾಲಕ್ಕೆ ತಕ್ಕ ಹಣ್ಣು, ಒಣ ಹಣ್ಣುಗಳು, ಹಸೀ ತರಕಾರಿ ಕೆಲವು ಇಷ್ಟೇ. ರಾತ್ರಿ ಮನೆ ಊಟ .

ಹೀಗೊಮ್ಮೆ ಬೆಳಗಿನ ಕಾಫಿ ಮುಗಿಸಿ ಪ್ಯಾಕ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಸೈರನ್ ಅಲರ್ಟ್ ! ಅಂದು ಸೆಪ್ಟೆಂಬರ್ 7. ನಾವಿದ್ದುದು ಅಲ್ ಕದೀರ್ ಅಪಾರ್ಟ್ಮೆಂಟ್ಸ್. ಮೊದಲ ಅಂತಸ್ತಿನಲ್ಲಿ. ಪಕ್ಕದ ಮನೆಯಲ್ಲಿದ್ದ ಮರಗಳ ಮೇಲೆ ಮನೆಗಳ ಮೇಲೆ  ಚೀರಾಡುವ ಪಾರಿವಾಳಗಳ ಸದ್ದು ಅನಾಥರಂತೆ ಪಟಪಟ ರೆಕ್ಕೆ ಬಡಿದು ಹಾರಾಡುತ್ತಿದ್ದವು. ನಮ್ಮ ಗಾಜಿನ ಕಿಟಕಿಯಿಂದ ಸ್ಪಷ್ಟವಾಗಿ ಗೋಚರ 'ಈ ಸೈರನ್ ಯುದ್ಧದ ಸೈರನ್ ಥರಾ ಇದೆ. HMT ಡಿಫೆನ್ಸ್ ನಲ್ಲಿ ಕೇಳಿದ ನೆನಪು, ಯಾವುದಕ್ಕೂ ಜೋಪಾನವಾಗಿರು' ಎಂದವರೇ ಕೆಲಸಕ್ಕೆ ಹೊರಟುಬಿಟ್ಟರು. ನನ್ನ ಮರಿಗಳು ನನ್ನ ತಾಯ್ನಾಡಿನಲ್ಲಿ ಹಿರಿಯರ  ಆಶ್ರಯದಲ್ಲಿ ಇದ್ದುದರಿಂದ ನನಗಂತೂ ಆತಂಕವಿರಲಿಲ್ಲ. ಇದ್ದ ಒಂದೇ ಬೇಸರವೆಂದರೆ ನಾನು ಆಗಷ್ಟೇ ಕಳೆದುಕೊಂಡಿದ್ದ ಕಿರಿಯ ಮಗನ ನೆನಪು. 
ಭಾಷೆ ಅರ್ಥವಾಗದಿದ್ದರೂ TV ನೋಡುತ್ತಾ ನೋಡುತ್ತಾ ಯುದ್ಧದ ಭೀಕರತೆ ತಿಳಿಯುತ್ತಾ ಬಂತು. ನಮ್ಮ ಮನೆಯ ಮುಂದಿದ್ದ ರಸ್ತೆಯಲ್ಲಿ ಪ್ರತಿದಿನ ಒಂದಲ್ಲಾ ಒಂದು ಯುದ್ಧಕ್ಕೆ ಸಂಬಂಧಿಸಿದ ಪೆರೇಡ್. ಪ್ರತಿದಿನ ಸಂಜೆ 6 ಕ್ಕೆ ಬ್ಲಾಕ್ ಔಟ್. ಕಡುಗತ್ತಲೆಯಲ್ಲಿ  ಯಾರೊಬ್ಬರು ಸಿಗರೇಟ್ ಹತ್ತಿಸಿದರೂ ಗಾಳಿಯಲ್ಲಿ ಗುಂಡುಗಳು ಓಡಾಡುವಷ್ಟು ಸೈನಿಕರ ಪಹರೆ ! ಒಮ್ಮೆ ಲೋಡೆಡ್ ಗನ್ ಹಿಡಿದ ಸೈನಿಕರು ಕಾಣಿಸಿಕೊಂಡರೆ ಮತ್ತೊಂದು ದಿನ 50 ರಿಂದ 60 ಪ್ಯಾಟನ್ ಟ್ಯಾಂಕ್ ಗಳ ದರ್ಶನ. ಎಲ್ಲವೂ ಮರಳಿನ ಬಣ್ಣದಲ್ಲಿ !! ಯುದ್ಧದ ತೀವ್ರತೆ ಹೆಚ್ಚಿದಂತೆ ಮನೆಗಳಲ್ಲಿದ್ದ 16 ವರ್ಷದ ಮೇಲ್ಪಟ್ಟ ಗಂಡು ಮಕ್ಕಳನ್ನು , ಬಲವಂತವಾಗಿ ಸೈನ್ಯಕ್ಕೆ ಎಳೆದೊಯ್ಯುವ ಪ್ರಸಂಗ ಅವರ ತಂದೆತಾಯಿಯರ ಗೋಳು ನೋಡಲಾಗುತ್ತಿರಲಿಲ್ಲ. ನಮ್ಮವರು ಡ್ಯೂಟಿಗೆ ಹೊರಟ ಕೂಡಲೇ ಯುದ್ಧದ ಕೆಲವು ಕೌತುಕಗಳನ್ನು ನೋಡಲು ಬಿಸಿಲುಮಚ್ಚಿಗೆ ಹೋಗಿ ನಿಲ್ಲುತ್ತಿದ್ದೆ. ಹಾಗೆ ನಿಂತಾಗ ಒಮ್ಮೆ ಒಂದು ಸಿಲಿಂಡರ್ ಮಾದರಿಯ ಒಂದಿಂಚಿನ ಲೋಹದ ತುಂಡೊಂದು ನನ್ನ ಬಲಭುಜದ ಪಕ್ಕ ಹಾಯ್ದು ಟೆರೇಸ್ ಮೂಲೆಯ ಗೋಡೆಯ ಮೇಲೆ ಬಿತ್ತು. ಕಣ್ಬಿಟ್ಟು ನೋಡುವಷ್ಟರಲ್ಲಿ ಗೋಡೆಯ ದೊಡ್ಡ ತುಂಡೊಂದು ಮುರಿದು ಭೂಮಿ ಸೇರಿಯಾಗಿತ್ತು. ನಡೆದದ್ದೇನು ? ಎಂದು ಯೋಚಿಸಿದ್ದೇ ಆಮೇಲೆ. ಆ ಲೋಹದ ತುಂಡನ್ನು ಬಹಳ ದಿನ ಮಕ್ಕಳಿಗೆ ತೋರಿಸಲೆಂದು ಇಟ್ಟಿದ್ದೆ. ವಾಪಸ್ ಹೋಗುವಾಗ ಫ್ಲೈಟ್ ನಲ್ಲಿ ಸಮಸ್ಯೆ ಆಗುವುದೆಂದು ಬಿಸಾಕಿದ್ದೂ ಆಯ್ತು. 
ವಾರ ಕಳೆಯುತ್ತಿದ್ದಂತೆ ಬಾಂಬ್ ಬ್ಲಾಸ್ಟ್ !! ಕೂಡಲೇ ಟೆರೇಸ್ ಗೆ ಓಡಿದೆ. ರಷ್ಯಾದ ಯುದ್ಧ ವಿಮಾನವೊಂದು ಪೆಟ್ರೋಲ್ ಬಂಕ್ ಮೇಲೆ ಧಾಳಿ ನಡೆಸಿತ್ತು. ಕಾಲ್ಗಳಿಗೆ ದೂರವಾದರೂ ದೃಷ್ಟಿಗೆ ಎಟುಕುತ್ತಿದ್ದ ಆ ಪೆಟ್ರೋಲ್ ಬಂಕ್ ಹತ್ತು ದಿನವಾದರೂ ಕಳೆಗುಂದದೆ ಅಗ್ನಿದೇವನೇ ಪ್ರತ್ಯಕ್ಷವಾದಂತೆ ಹೊಂಬಣ್ಣದಲ್ಲಿ ನಿಗಿನಿಗಿ ಉರಿಯುತ್ತಲೇ ಇತ್ತು. ಆ ರೀತಿಯ ಅನೇಕ ಪೆಟ್ರೋಲ್ ಬಂಕ್ ಗಳು ಒಂದೆರಡು ತಿಂಗಳಲ್ಲಿ ಸಾಲು ಸಾಲಾಗಿ ಉರಿದಿದ್ದವು. ತೈಲ ನಿಕ್ಷೇಪದ ಆಧಾರಗಳು ಬರಿದಾಗಿ ನಿಂತಿದ್ದವು. ಆ ದೇಶದ ಮೂಲಾಧಾರ ಸೊರಗಿತ್ತು. ನಿತ್ಯವೂ ಒಂದು ಯುದ್ಧದ ವಿಚಾರ ಹೇಳುತ್ತಿದ್ದರು. ಭಾರತದ ವೈದ್ಯರುಗಳನ್ನು ಅಪಹರಿಸಿ ಕಣ್ಣುಗಳನ್ನು ಕಟ್ಟಿ ಗಾಯಾಳುಗಳ ಔಷಧೋಪಚಾರ ಮುಗಿಸಿ ಕ್ಷೇಮವಾಗಿ ವಾಪಸ್ ತರುತ್ತಿದ್ದುದು, ಆಫೀಸ್ ಗೆ ಹೋಗುವ ಮಾರ್ಗ ಮಧ್ಯೆ ಸೈರನ್ ಬಂದಾಗ ಅಲ್ಲಲ್ಲಿ ತೋಡಿದ್ದ ಟ್ರೆಂಚ್ ಗಳಿಗೆ ತಾವೆಲ್ಲಾ ಧುಮುಕುತ್ತಿದ್ದ ಸಮಾಚಾರ... ಹೀಗೆ. 
ಭಾರತದಿಂದ ಬಂದ ಬಹುಮಂದಿಗೆ ಮಕ್ಕಳೊಡನೆ ತಾಯ್ನಾಡಿಗೆ ಹಿಂದಿರುಗುವ ತವಕ. ಒಂದೆರಡು ಮೀಟಿಂಗ್ ನಡೆಸಿದ ಮೇಲೆ ವಾಪಸ್ ಹೊರಡುವ ನಿರ್ಧಾರವಾಯ್ತು .  ಹೊರಡುವ ದಿನ ನಿರ್ಧಾರವಾಗುತ್ತಿದ್ದಂತೆ ಆದಷ್ಟೂ ಕಮ್ಮಿ ಸಾಮಾನುಗಳನ್ನು ಪ್ಯಾಕ್ ಮಾಡಿದ್ದಾಯ್ತು. ನಮ್ಮ ನೆಲಜಲ, ಜನ ಕಾಣುವವರೆಗೆ ಬದುಕುಳಿಯಲು ಬೇಕಾದ, ಆಹಾರ ಪಾನೀಯಗಳ ಸಂಗ್ರಹಣೆಯೂ ಆಯ್ತು. ಎರಡು ಫ್ಲಾಸ್ಕ್ ನಲ್ಲಿ ಹಾಲು , ಬಿಸಿನೀರು ಕುಡಿಯುವ ನೀರಿನ ಬಾಟಲಿಗಳು, ಬ್ರೆಡ್, ಬಿಸ್ಕೆಟ್, ನೆಸ್ಕೆಫೆ , ಬೋರ್ನ್ವಿಟ, ಸಕ್ಕರೆ, ಹಣ್ಣುಗಳು, ಮತ್ತಷ್ಟು ಚಪಾತಿ, ಚಟ್ನಿಪುಡಿ, ಇತ್ಯಾದಿ .
ಮುಂಗಡವಾಗಿ ಯಾವ ಟ್ರಾನ್ಸ್ಪೋರ್ಟೆಶನ್ ಸಹ ಬುಕ್ ಮಾಡಿರಲಿಲ್ಲ. ಮಾಡಲು ಸಾಧ್ಯವೂ ಇರಲಿಲ್ಲ. ಬಾಗ್ದಾದ್ ನಲ್ಲಿ ನಫರತ್ ಎಂದು ಕರೆಯಲ್ಪಡುವ  ವಾಹನವೊಂದರಲ್ಲಿ ನಮ್ಮ ಪ್ರಯಾಣ ಬೆಳಿಗ್ಗೆ 6 ಕ್ಕೆ ಆರಂಭವಾಯ್ತು. ಕುವೈಟ್ ವರೆಗೆ, ಸಾವಿರ ಮೈಲುಗಳ ದಾರಿಯನ್ನು ಸಾಗಿಸಬೇಕಿತ್ತು. ರಸ್ತೆಗಳು ವಿಶಾಲವಾದ್ದರಿಂದ, ಮರುಭೂಮಿಯ ನಡುವಿನ ಉಬ್ಬುತಗ್ಗಿಲ್ಲದ ಅಂಕುಡೊಂಕು ಇಲ್ಲದ ನೇರ ರಸ್ತೆಯಾದ್ದರಿಂದ ವೇಗಕ್ಕೆ ಅಡ್ಡಿ ಇರಲಿಲ್ಲ. ಒಂದೆರಡು ಹಳ್ಳಿಗಳನ್ನು ದಾಟಿದ ಮೇಲೆ , ಇದ್ದಕ್ಕಿದ್ದಂತೆ ನಮ್ಮ ವ್ಯಾನ್ ಕಿಟಕಿಯ ಪಕ್ಕದಲ್ಲೇ ಅತಿ ಕೆಳಗಿನ ಲೆವೆಲ್ ನಲ್ಲಿ ಯುದ್ಧ ವಿಮಾನವೊಂದು ಎಲ್ಲೋ ಬಾಂಬ್ ಸಿಡಿಸಿ ರೇಡಾರ್ ದೃಷ್ಟಿಗೂ ನಿಲುಕದಷ್ಟು ಕೆಳಗಿನಿಂದ , ತಪ್ಪಿಸಿಕೊಂಡು ಕ್ಷಣಾರ್ಧದಲ್ಲಿ ಮಿಂಚಿ ಮಾಯವಾಯ್ತು. ಎಲ್ಲರಿಗೂ ಒಂದರ್ಧ ಗಂಟೆ ತಳಮಳ ಕಾಣದ ದೈವಕ್ಕೊಂದು ನಮಸ್ಕಾರ ಹಾಕಿ ರಸ್ತೆ ಸಾಗಿಸುತ್ತಿದ್ದಂತೆ ಹಿಂಡು ಹಿಂಡಾಗಿ ಒಂಟೆಗಳು. ಎಲ್ಲೆಲ್ಲಿ ನೋಡಿದರೂ ಮರಳು, ಮರಳು, ಮರಳು !!! ಈ ಅನುಭವವೂ ಚೆನ್ನಾಗಿಯೇ ಇತ್ತು.  
ನಾವು ನ್ಯೂಟ್ರಲ್ ಬಾರ್ಡರ್ ಸೇರಿದಾಗ ಸಂಜೆ 6. ನಮ್ಮನ್ನು ಹೊತ್ತು ತಂದ ವ್ಯಾನ್, ನಮ್ಮನ್ನೂ ಸಾಮಾನುಗಳನ್ನೂ ಇಳಿಸಿ ಹೊರಟು ಹೋಯಿತು. ಮರಳು ಗಾಡಿನ ಮಧ್ಯೆ ! ಅಲ್ಲೇನಿದೆ ? ಒಂದು ಶೀಟ್ ಹಾಕಿದ್ದ ದಪ್ಪ ಬೀಗ ಜಡಿದಿದ್ದ ರೂಂ ಎನ್ನಬಹುದಾದ ಕಟ್ಟಡ ! ಮತ್ತೇನೂ ಇಲ್ಲ. ಸ್ವಲ್ಪ ಸುಧಾರಿಸಿಕೊಂಡು ಕಾಫಿ ಕುಡಿದು ಆಕಾಶದತ್ತ ನೋಡುತ್ತಿದ್ದಂತೆ, ಸಹಸ್ರಾರು ಕೆಂಪು ಮಿಣುಕು ಹುಳುಗಳಂತೆ anti ಏರ್ ಕ್ರ್ಯಾಫ್ಟ್ಸ್ ಹಾರಿಸಿದ ಟ್ರೇಸರ್ ಬುಲೆಟ್ ಗಳು ತುಂಬಿಕೊಂಡವು. ಕ್ಷಣಾರ್ಧದಲ್ಲಿ ಮುಗಿಲೆತ್ತರಕ್ಕೆ ಪೆಟ್ರೋಲ್ ಬಂಕ್ ಗಳ ಮೇಲೆ ನಡೆಸಿದ್ದ ಧಾಳಿಯಿಂದ ಅಗ್ನಿದರ್ಶನ !! ಬಹು ದೂರವಿದ್ದರೂ, ಚೆನ್ನಾಗಿ ನೋಡಬಹುದಿತ್ತು. ಧಾಳಿಗೀಡಾದ ನಗರ 'ಬಾಸ್ರಾ' !! ಇರಾಕ್ ದೇಶದ ಪ್ರಮುಖ ಬಂದರು ಹಾಗೂ ಆರ್ಥಿಕವಾಗಿ ಮುಂದುವರೆದಿದ್ದ ನಗರ ! ಕಣ್ಮುಂದೆಯೇ ನಿರ್ನಾಮವಾಗಿತ್ತು. ರಾತ್ರಿ ಹಸಿವಾದಾಗ ಒಂದಿಷ್ಟು ತಿಂದು ಎರಡು ದೊಡ್ಡ ಪೆಟ್ಟಿಗೆಗಳನ್ನು ಜೋಡಿಸಿಕೊಂಡು ದುಪ್ಪಟಿ ಹೊದ್ದು ಮಲಗಿದೆವು. ನಮ್ಮ ಜೀವಮಾನದಲ್ಲಿ ಆಕಾಶದ ಕೆಳಗೆ ಭೂಮೀನೆ  ಹಾಸಿಗೆ ಆಕಾಶವೇ ಕಂಬಳಿ ಅಂತಾ ಮಲಗಿದ್ದು ಅದೇ ಮೊದಲು  !!
ಬೆಳಿಗ್ಗೆ ನಾಲ್ಕಕ್ಕೆ ಎದ್ದು ಸಿಕ್ಕಿದಲ್ಲಿ ಪ್ರಾತರ್ವಿಧಿ ಮುಗಿಸಿ ಕುವೈಟ್ ನಿಂದ ಬಂದ ಬಸ್ಸೊಂದರಲ್ಲಿ ಎಲ್ಲರೂ ಕುವೈಟ್ ಏರ್ಪೋರ್ಟ್ ಗೆ ಹೊರಟೆವು. ಯಾವುದೂ ಫ್ಲೈಟ್ ಬುಕ್ ಆಗದ ಕಾರಣ ಅಲ್ಲೇ ಟಿಕೆಟ್ ಪಡೆದು ಚಾರ್ಟರ್ಡ್ ಪ್ಲೇನ್ ನಲ್ಲಿ ಹೊರಟಿದ್ದು , ಬಾಂಬೆಗೆ. ಸಮಯವಿದ್ದ ಕಾರಣ ಅಲ್ಲಲ್ಲೇ ಸುತ್ತಾಡುತ್ತಿದ್ದೆವು. ಈ ರೀತಿ ಯುದ್ಧದ ಸಮಯದಲ್ಲಿ ಬಂದವರಿಗೆ ಸರ್ದಾರ್ಜೀಗಳ ಸಂಸ್ಥೆಯೊಂದು ಪೂರಿ ಪಲ್ಯಗಳನ್ನು ನೀಟಾಗಿ ಪ್ಯಾಕ್ ಮಾಡಿ ಎಲ್ಲರಿಗೂ ಉಚಿತವಾಗಿ ಕೊಡುತ್ತಿದ್ದರು. ನಮ್ಮ ಬಳಿ ನಾವು ತಂದ ತಿಂಡಿ ತೀರ್ಥವಿದ್ದ ಕಾರಣ ನಮಗಾಗಿ ಪೂರಿ ಪಲ್ಯ ತೆಗೆದುಕೊಂಡು ಮಿಕ್ಕ ಮಕ್ಕಳಿಗೆ ಕೊಟ್ಟಿದ್ದಾಯ್ತು. ನಾವು ಏರಿದ್ದು ಬಾಂಬೆಗೆ ಎಂದಾದರೂ ತಲುಪಿದ್ದು ಡೆಲ್ಲಿಗೆ !!   
ಒಟ್ಟಿನಲ್ಲಿ ತಾಯ್ನಾಡಿಗೆ ತಲುಪಿದ್ದಾಗಿತ್ತು. ಡೆಲ್ಲಿಯ ಹೋಟೆಲ್ ರಣಜಿತ್ ನಲ್ಲಿ ನಮಗೆ ಇರಲು ಅವಕಾಶವಿತ್ತು. ಅಲ್ಲಿ ಸ್ನಾನಪಾನ ಊಟ ಮುಗಿಸಿ ವಿಮಾನ ಏರಿ ಬೆಂಗಳೂರು ಮುಟ್ಟಿದಾಗ ರಾತ್ರಿ 8-30. ಯುದ್ದದ ವಿಚಾರ ಕೇಳಲು ನನ್ನ ಘನ ಸಂಸಾರವೆಲ್ಲಾ  ರೇಡಿಯೋ ಸುತ್ತ ಕುಳಿತಿದ್ದಾಗ ನಾವು ಮನೆ ಸೇರಿದ್ದು ಎಲ್ಲರಿಗೂ ಆಶ್ಚರ್ಯ ಸಂತೋಷ !!..

1979 ಇಂಗ್ಲಿಷ್ - ವಿಂಗ್ಲಿಶ್. ಇದು ನನ್ನ ಅನುಭವ !

1979 ಇಂಗ್ಲಿಷ್ - ವಿಂಗ್ಲಿಶ್. ಇದು ನನ್ನ ಅನುಭವ !  

    ನನ್ನವರು ಮೊದಲ ಬಾರಿ HMT ಯಿಂದ ಬಾಗ್ದಾದ್ ಗೆ ಡೆಪ್ಯುಟ್ ಆದಾಗ ನನಗೆ ಖುಷಿಯಾದರೂ ಇಬ್ಬರು ಮಕ್ಕಳನ್ನು ಒಂದೆರಡು ವರ್ಷ ಬಿಟ್ಟಿರುವುದು ಹೇಗೆ ? ಎಂಬುದು ದೊಡ್ಡ ಪ್ರಶ್ನೆಯಾಗಿತ್ತು. ತಿಂಗಳಿಗೆ ಒಂದು ಸಾವಿರ ಸಂಬಳ ಎಣಿಸುತ್ತಿದ್ದ ಆ ಕಾಲಕ್ಕೆ ತಿಂಗಳಿಗೆ 7000 ರೂ. ವಿದೇಶೀ ಸಂಬಳದ ಮೋಹ ಸೆಳೆದಿತ್ತು. ಜವಾಬ್ದಾರಿಗಳನ್ನು ದಡ ಮುಟ್ಟಿಸುವ ಸಲುವಾಗಿ ಹಣದ ಅವಶ್ಯಕತೆಯೂ ಇತ್ತು. ನಾನು ಸೇರಿದ್ದೇ ದೊಡ್ಡ ಕುಟುಂಬವಾದ್ದರಿಂದ ಎಲ್ಲಿ ಬಿಡಬೇಕೆಂಬ ಯೋಚನೆ ಕಿಂಚಿತ್ತೂ ಇರಲಿಲ್ಲ. ಅತ್ತೆ ಮಾವ , ಓರಗಿತ್ತಿ ಭಾವನವರು, ಮೈದುನ ನಾದಿನಿಯರು, ಓರಗೆಯ ಮಕ್ಕಳು, ಹೀಗೆ ದೊಡ್ಡ ಕುಟುಂಬವೇ ! ಸಿಕ್ಕ ಅವಕಾಶ ಬಿಡಬಾರದು ಎಂಬ ದೃಷ್ಟಿಯಿಂದ ಹೊರಡುವ ನಿರ್ಧಾರ ಮಾಡಿದೆ. ನನ್ನವರು ಅವರ HMT ಸಂಸಾರದೊಡನೆ ಮೊದಲು ಹೊರಟುಬಿಟ್ಟರು . ನಾನು ಹೊರಟಿದ್ದು ಕೆಲವು ತಿಂಗಳಿನ ನಂತರ ವಿದೇಶಕ್ಕೆ ಬೇಕಾಗಿದ್ದ ಪಾಸ್ ಪೋರ್ಟ್, ವೀಸಾ ಎಲ್ಲಾ ಆಗಬೇಕಿತ್ತು. ಇದಕ್ಕೆ ಸಮಯವೂ ಬೇಕಿತ್ತು . 

     ಇವರು ಹೊರಟ ದಿನ ಮನೆಯ ಮುಂದೆ HMT ವತಿಯಿಂದ ಎರಡು ಕಾರು. ಮೊದಮೊದಲು ನಮ್ಮ ಸಂಸಾರದಿಂದ ವಿದೇಶಕ್ಕೆ ಹೊರಟವರು ಏನೋ ಸಂಭ್ರಮ, ಸಡಗರ !! ಏರ್ಪೋರ್ಟ್ ನ ವಿದ್ಯಮಾನಗಳನ್ನು ಕಾಣಲು ವಯಸ್ಸಾದವರಿಗೆ ಮೊದಲ ಆದ್ಯತೆ. ಹಾಗಾಗಿ ನನ್ನ ಅತ್ತೆ, ಭಾವ, ಓರಗಿತ್ತಿ, ನನ್ನ ತಂದೆತಾಯಿ, ನಾನು, ನನ್ನ ಮಕ್ಕಳು ಹೊರಟಿದ್ದು ಬೆರಗಿನಿಂದ ವಿಮಾನ ನಿಲ್ದಾಣ ನೋಡಿದೆವು. ಚಿತ್ರದುರ್ಗದಲ್ಲಿದ್ದ ನನ್ನ ಚಿಕ್ಕಪ್ಪ, ಏರ್ಪೋರ್ಟ್ ಗೆ ಅಳಿಯನನ್ನು ಬೀಳ್ಕೊಡಲು ಹಾರ ತುರಾಯಿಗಳೊಂದಿಗೆ ಬಂದದ್ದು, ಅಂದಿನ ಸಂಸ್ಕೃತಿಯ ಕನ್ನಡಿ. ಅದೆಲ್ಲ ಇತಿಹಾಸಕ್ಕೆ ಸೇರಿಹೋದ ಸಮಾಚಾರ ! ಆಗ ನಿಲ್ದಾಣದ ಪಕ್ಕದಿಂದ ಮೊದಲ ಮಹಡಿಗೆ ಹೋಗಲು ಮೆಟ್ಟಿಲಿತ್ತು. ಅದರ ಮೂಲಕ ಮೇಲೇರಿ ಹೊರಡುವವರು ವಿಮಾನದ ಒಳಗೆ ಏರುವವರೆಗೂ ನೋಡಬಹುದಿತ್ತು. ಈಗ ಎಲ್ಲ ಬದಲಾಗಿದೆ.  
ನಂತರ ನನ್ನ ಪ್ರಯಾಣಕ್ಕೆ ಬೇಕಾದ ಸಿದ್ದತೆ. ಮಕ್ಕಳಿಗೆ ರಜೆಯಲ್ಲಿ ಬರಲು ಪಾಸ್ ಪೋರ್ಟ್ ಎಲ್ಲ ರೆಡಿ ಮಾಡಬೇಕಿತ್ತು. ಇದಕ್ಕಾಗಿ ಶಾಲೆಗೆ ರಜೆ ಹಾಕಿಸಿ ಕಾರ್ಪೋರೇಶನ್ ಪ್ರಾಂಗಣದಲ್ಲಿ ಮಕ್ಕಳಿಗೆ ಐಸ್ ಕ್ರೀಂ ಕೊಡಿಸಿ, ಅವರ ಆರೋಗ್ಯ ಸ್ಥಿತಿ ತಪಾಸಣೆ ಮಾಡಿಸಿ ಯಾವುದೋ ಸೂಜಿ ಚುಚ್ಚಿಸಿದ್ದೂ ಆಯ್ತು. ನಾನು ತೆಗೆದುಕೊಳ್ಳಬೇಕಾದ ಅಡಿಗೆಗೆ ಬೇಕಾದ ಪುಡಿಗಳು, ಬಾಗ್ದಾದ್ ನಲ್ಲಿ ಸಿಕ್ಕದ ಪ್ರಾವಿಷನ್, ತೆಗೆದಿಡುವುದರಲ್ಲಿ ತಿಂಗಳುಗಳೇ ಆಯ್ತು. ಅಲ್ಲಿಗೆ ಬೇಕಾದ ಪಾಸ್ಪೋರ್ಟ್ ರೆಡಿ ಆಯ್ತು. ವೀಸಾಗೆ ಕಾದಿದ್ದು ಏರ್ ಟಿಕೆಟ್  ಬಂದಾಯ್ತು .ಅಟ್ಯಾಕ್ ಪ್ರಯಾಣ ಒಂದು ವಾರಕ್ಕೆ ತಳ್ಳಿಹೋಯ್ತು. 

      ನಮ್ಮ ವೀಸಾ ಬರುವ ವಿಮಾನಕ್ಕೆ ಹಕ್ಕಿ ಅಟ್ಯಾಕ್ ಮಾಡಿದ್ದರಿಂದ ಪ್ರಯಾಣ ಒಂದು ವಾರಕ್ಕೆ ತಳ್ಳಿಹೋಯ್ತು. ಪುನಃ ರೆಡಿ ಮಾಡಿಕೊಂಡು ಹೊರಟೆವು. HMT ಅಧಿಕಾರಿಯೊಬ್ಬರು ನನ್ನ ಬಳಿ ಆಫೀಸ್ ಲಕೋಟೆ ಕೊಟ್ಟು ಅದನ್ನು ತೆಗೆದು ನೋಡಬಾರದೆಂದೂ ಹೋದೊಡನೆ ಅಲ್ಲಿನ HMT ಉನ್ನತಾಧಿಕಾರಿಗಳಿಗೆ ಕೊಡಬೇಕೆಂದೂ  ತಿಳಿಸಿದರು. ಸರಿ ! ಆಯ್ತು ಅಂದೇ.  

ನನ್ನ  ಮೊದಲ ವಿಮಾನಯಾನ ಆರಂಭವಾಯ್ತು !! ನನ್ನ ಜೊತೆಯಲ್ಲಿ ಶಿವಮೊಗ್ಗೆಯ ರಮಾ, ಕೇರಳದ ಅನ್ನಿ ಪಾಲ್ ಥಾಮಸ್ ಬಂದರು. ಕೇರಳದವರ ಎರಡು ಮಕ್ಕಳೂ ಸೇರಿ ಐದು ಮಂದಿ. ಇಲ್ಲಿಂದ ಬೊಂಬಾಯಿಗೆ ತಲುಪಿದಾಗ ಅಲ್ಲಿ HMT ಅಧಿಕಾರಿಯೊಬ್ಬರು  ಬಂದಿದ್ದು ನಮ್ಮನ್ನು  ಏರ್ಪೋರ್ಟ್ ಬಳಿಯಿದ್ದ ಸೆಂಟಾರ್ ಹೋಟೆಲ್ ಗೆ ಬಿಟ್ಟು ರಾತ್ರಿ ಪುನಃ ಬಾಗ್ದಾದ್ ವಿಮಾನ ಹೊರಡುವ ಮುನ್ನ ಬರುತ್ತೇನೆಂದು ಹೇಳಿ ಹೊರಟುಹೋದರು. 
         
     ಆ ದೊಡ್ಡ 5 ಸ್ಟಾರ್ ಹೋಟೆಲ್ ನೋಡಿ ಏನೋ ಹೇಗೋ ಎಂದುಕೊಂಡೆ. ಸರಿಯಾಗಿ ಮಾತಾಡಲು ಇಂಗ್ಲಿಷ್, ಹಿಂದಿ ಯಾವುದೂ ಬಾರದು. ಪರಿಸ್ಥಿತಿ ಸಂದಿಗ್ಧವಾಯ್ತು. ಹೇಗಾದರೂ ಸಂಭಾಳಿಸಬೇಕಿತ್ತು. ಊಟ, ತಿಂಡಿ, ಕಾಫಿ, ಟೀ ಏನು ತೆಗೆದುಕೊಂಡರೂ ವೋಚರ್ ಪಡೆಯಬೇಕಿತ್ತು. ಇದ್ದಷ್ಟು ದುಡ್ಡನ್ನು ಡಾಲರ್ಗೆ ಬದಲಾಯಿಸಿ ಸ್ವಲ್ಪ ಹಣವನ್ನು ಮಾತ್ರ ಇಟ್ಟುಕೊಂಡಿದ್ದೆವು. ವೋಚರ್ ಎಂದರೇನೆ ನಮಗೆ ತಿಳಿಯದು. ಅದರ ಸಹವಾಸ ಬೇಡವೆಂದರೆ ಹೊಟ್ಟೆಗಿರದ ಪರಿಸ್ಥತಿ ! ನಮ್ಮ ಮನಸ್ಸಿನಲ್ಲಿ ಸೆಂಟಾರ್ ಹೋಟೆಲ್ ಹೋಗಿ   ಸೆರೆಮನೆಯಾಯ್ತು. 

     ಹೇಗಿದ್ದರೂ ಒಂದರ್ಧ ದಿನ ತಾನೇ ? ಎನಿಸಿತು. ಬೆಳಗಿನ ನಾಲ್ಕು ಗಂಟೆಯ ಇರಾಕ್ ಏರ್ವೇಸ್ ಏರಲು ರಾತ್ರಿ ಹನ್ನೆರಡೂವರೆಗೆ ಹೋಗುವುದಾಗಿತ್ತು. ಸರಿ, ಊಟದ ಟೈಮ್ ಬಂತು, ರೂಂ ನಲ್ಲಿದ್ದ ಫೋನ್ ಉಪಯೋಗಿಸಲು ಗೊತ್ತಿರಲಿಲ್ಲ. ಕಷ್ಟಪಟ್ಟು ಕಿಚನ್ ಫೋನ್ ನಂಬರ್ ಹುಡುಕಿ ಇಂಗ್ಲಿಷ್ನಲ್ಲಿ  ಸೆಂಟೆನ್ಸ್ ಎಲ್ಲ ರೆಡಿ ಮಾಡಿಕೊಂಡು ಹೆದರುತ್ತಲೇ ಫೋನಾಯಿಸಿದೆ. ಆ ಹೋಟೆಲ್ ಸ್ಟೈಲ್ ಗೆ ಅನುಗುಣವಾಗಿ ಅತ್ತ ಕಡೆಯಿಂದ ಉತ್ತರ ಬಂತು. ಅವನು ಕೇಳುವ ಮುನ್ನವೇ 'ಪ್ಯೂರ್ ವೆಜಿಟೇರಿಯನ್. ಸೆಂಡ್ ಟೂ ಪ್ಲೇಟ್ ಮೀಲ್ಸ್ ಐ ಸೇ' ಅಂದು ಫಟ್ ಅಂತ ಫೋನಿಟ್ಟೆ. ಇನ್ನೇನಾದರೂ ಕೇಳಿದರೆ ಉತ್ತರಿಸುವ ಸ್ಥಿತಿಯಲ್ಲಿ ನಾನಿರಲಿಲ್ಲ. 

ಕಾದು ಕಾದೂ ಸಾಕಾಯ್ತು 'ಹೇಳ್ಕೋಳ್ಳೋಕ್ ದೊಡ್ ಹೋಟ್ಲು, ಸರ್ವಿಸು ಪರಪಾಟ್ಲು' ಅನ್ನೋ ಹಾಗಿತ್ತು. ಅಂತೂ ಇಂತೂ ಸ್ಟೈಲ್ ಆಗಿ ಊಟ ಅಂತೂ ತಂದಿಟ್ಟು ಹೊರಟ. ವೋಚರ್ ಅಂದೇ.. 'ಯೆಸ್ ಮೇಡಂ' ಎಂದು ಹೊರಟುಹೋದ. ವೋಚರ್ ನ್ನು ನಾವು ಹೋಟೆಲ್ ನವರಿಗೆ ಕೊಡಬೇಕೋ ಅಥವಾ ಹೋಟೆಲ್ ನವರು ನಮಗೆ ಕೊಡುತ್ತಾರೋ ಅದೇ ತಿಳಿದಿರಲಿಲ್ಲ. ಅವರೇ ಸ್ವಲ್ಪ ಹೊತ್ತಿನ ನಂತರ ತಂದು ಸಹಿ ಹಾಕಿಸಿಕೊಂಡು ಹೋಗಿದ್ದರು. ನೆಮ್ಮದಿಯ ನಿಟ್ಟುಸಿರಿಟ್ಟೆ. 
     ನಾನು, ರಮಾ ಒಂದೇ ರೂಮಿನಲ್ಲಿ ಇದ್ದುದರಿಂದ ಊಟಕ್ಕೆ ಅಂದವಾಗಿ ಜೋಡಿಸಿದ್ದ, ಕುರ್ಚಿಯಲ್ಲಿ ಕುಳಿತು ಥಾಲಿ ಓಪನ್ ಮಾಡಿದೆವು. ನೋಡಲು ಸೊಗಸಾಗಿತ್ತು. ಆದರೆ ಎಲ್ಲವೂ ತಣ್ಣಗೆ. ಪೂರಿಯ ಜೊತೆಗೆ ಮೆಹೆಂದಿ ಪೇಸ್ಟ್ ನಂತೆ ಯಾವುದೋ ಹಸಿರು ಬಣ್ಣದಲ್ಲಿದ್ದ ಪಲ್ಯ. ಅದರ ಮಧ್ಯೆ ಬಿಳಿಬಿಳಿಯಾಗಿ ತುಂಡುಗಳು. ಮೆಲ್ಲಗೆ ತುಂಡೊಂದನ್ನು ಪ್ರೆಸ್ ಮಾಡಿದೆ. ಮೆತ್ತಗಿತ್ತು. ಭಯವಾಯ್ತು. ರಮಾಗೆ ಹೇಳಿದೆ ' ರಮಾ, ಇದು ಏನೋ ನಾನ್- ವೆಜ್ ಇದ್ದಹಾಗಿದೆ. ಏನ್ ಮಾಡೋದು ? ಅಷ್ಟು ಹೇಳಿದ್ರೂ ತಂದಿರೋದು ನೋಡು, ಹೊಲಸು' ! ಎಂದೇ. 
ಆದ್ರೆ ಹಸಿವು ಯಾರನ್ ಬಿಟ್ಟಿದ್ದು ? ಆ ಬಟ್ಟಲನ್ನು  ಹಾಗೇ ಹೊರಗಿಟ್ಟು ಮಿಕ್ಕದ್ದನ್ನು ಹೊಟ್ಟೆಗೆ ತಲುಪಿಸಿದ್ದಾಯ್ತು. ಸುಮಾರು ದಿನಗಳ ನಂತರ ಆ ಬಟ್ಟಲಿನಲ್ಲಿದ್ದ ಪಲ್ಯ  ಪಾಲಕ್ ಪನೀರೆಂದು ತಿಳಿಯಿತು !! ಮಾಡೋಕ್ಕೆ ಬರದು ಪುಕ್ಕಟೆ ಸಿಕ್ಕಿದ್ದು ಬಿಸಾಕಿದ್ದೆ.  ಪಶ್ಚಾತ್ತಾಪವಾಯ್ತು. ಏನ್ ಪ್ರಯೋಜನ ? 
ರಾತ್ರಿ ಸ್ವಲ್ಪ ಮಲಗಿದ ಶಾಸ್ತ್ರ ಮಾಡಿ 12.30 ಕ್ಕೆ ಏರ್ಪೋರ್ಟ್ ಗೆ ಹೊರಟೆವು. ನಮ್ಮನ್ನು ಕಳಿಸಲು ಬಂದಿದ್ದ HMT ವ್ಯಕ್ತಿಯೂ ಅಲ್ಲಿ ನಮ್ಮನ್ನಿಳಿಸಿ ಹೊರಟು ಹೋದರು. ಸರಿ, ತಪಾಸಣೆ, ಡಾಲರ್ ಕನ್ವರ್ಷನ್ ಎಲ್ಲ ಮುಗಿಸಿ ಇನ್ನೇನು ಒಳಗೆ ಹೋಗಬೇಕು ಎನ್ನುವಾಗ, ಇದ್ದಕ್ಕಿದ್ದಂತೆ NOC ಲೆಟರ್ ಬೇಕೆಂದರು. ಇಲ್ಲದಿದ್ದಲ್ಲಿ ನೀವು ಇಂಡಿಯಾ ಬಿಟ್ಟು ಹೊರಡುವಂತಿಲ್ಲ. ಜಂಘಾಬಲವೇ ಉರುಳಿದಂತಾಯ್ತು. ನಮಗೋ ಆ NOC ಗೆ ಅರ್ಥವೇ ಗೊತ್ತಿರಲಿಲ್ಲ. 
ನಮ್ಮದೇ ಆದ ಹರಕು ಹಿಂದಿಯಲ್ಲಿ ನಮ್ಮ ಗಂಡಂದಿರು ಬಾಗ್ದಾದ್ ಗೆ ಕೆಲಸದ  ಮೇಲೆ ಹೋಗಿದ್ದಾರೆ ಎಂದರೂ ನಂಬಲಿಲ್ಲ. ನಿಮ್ಮ ಗಂಡ ಅಂತಾ ಏನ್ ಗ್ಯಾರಂಟೀ ? ಅಂದ್ರೆ Answer ಮಾಡೋದ್ ಹೇಗೆ ? ತಲೆ ಚಚ್ಕೋಳೋ ಹಾಗಾಯ್ತು ಕರ್ಮ ಅನ್ಕೊಂಡೆ.. !!  ವಾಗ್ವಾದ ನಡೆಯುತ್ತಿದ್ದಂತೆ , ಬಾಗ್ದಾದ್ ಫ್ಲೈಟ್ ,  ಬೆಳಗಿನ ಜಾವ ನಾಲ್ಕಕ್ಕೆ ನಮ್ಮ ಕಣ್ಣೆದುರಿನಲ್ಲೇ ಮುಗಿಲಿಗೇರಿತ್ತು ! ಅಳು ಬರುವಂತಾಯ್ತು. ಬರುವುದೇನು ? ಅತ್ತೇ ಬಿಟ್ಟೆವು.  
ಇದು ಯಾರಿಗೆ ಬೇಕಿತ್ತು ? ಅತ್ತ ಗಂಡನ ಊರೂ ಇಲ್ಲ, ಇತ್ತ ಅತ್ತೆಮನೆಯೂ ಇಲ್ಲ.  ತ್ರಿಶಂಕು ಪರಿಸ್ಥಿತಿ ! ಆಗಿನ ಕಾಲಕ್ಕೆ ಸೆಲ್ ಫೋನ್ ಇರಲಿಲ್ಲ. ಸೆಲ್ ಫೋನೇನು ? ಲ್ಯಾಂಡ್ ಲೈನ್ ಬಳಸೋಕೂ ಗೊತ್ತಿರ್ಲಿಲ್ಲ. ಫೋನ್ ನಂಬರ್ ಇಟ್ಟುಕೊಳ್ಳದೆ ದೂರದ ಪ್ರಯಾಣ ಕೈಗೊಂಡಿದ್ದೆವು. ಯಾರನ್ನು ಕಾಂಟಾಕ್ಟ್ ಮಾಡಬೇಕು ? ಎಲ್ಲಿ ಹೋಗಬೇಕು ? ಹೋಟೆಲ್ ಟ್ರಾನ್ಸಿಟ್ ಇದ್ದುದು ಒಂದು ದಿನಕ್ಕೆ ಮಾತ್ರ. ಬೆಳಗ್ಗೆ ಹತ್ತರವರೆಗೆ ಅಲ್ಲಿಯೇ ಕುಳಿತಿದ್ದು ಸಿಬ್ಬಂದಿಯನ್ನು ಕೇಳಿ HMT ಆಫೀಸಿಗೆ ಕಾಂಟಾಕ್ಟ್ ಮಾಡಿಸಿದೆವು. ಅಲ್ಲಿಂದ ಒಬ್ಬರು ಬಂದು ನಮ್ಮನ್ನು HMT ಆಫೀಸಿಗೆ ಕರೆದುಕೊಂಡು ಹೋದರು. ಫೋನ್ ಬಳಕೆಯ ವಿಧಾನವೇ ಗೊತ್ತಿರಲಿಲ್ಲ. ಅವರೇ ಡಯಲ್ ಮಾಡಿಕೊಟ್ಟನಂತರ ಅಲ್ಲಿಂದ ಬೆಂಗಳೂರು ಆಫೀಸಿಗೆ ನಾವೇ ಮಾತಾಡಿ ವಿಷಯ ತಿಳಿಸಿದೆವು. 
ಪುನಃ ಮತ್ತೊಂದು ದಿನಕ್ಕೆ ಸೆಂಟಾರ್ ಹೋಟೆಲ್ ತಾತ್ಕಾಲಿಕವಾಗಿ ನಮ್ಮದಾಯ್ತು. ಮರುದಿನ ಬೆಂಗಳೂರು ಅಧಿಕಾರಿಯೊಬ್ಬರು ಬಂದು ನಮಗೆ ಬೇರೆ ಹೋಟೆಲ್ ಗೊತ್ತು ಮಾಡಿದರು. ಅಲ್ಲಿಗೆ ನಮ್ಮ ಎತ್ತಂಗಡಿ. ಅಲ್ಲಿಗೆ ನಮ್ಮ ಪ್ರಯಾಣ ಪುನಃ ಒಂದು ವಾರ ಮುಂದಕ್ಕೆ ಹೋಯ್ತು. ಮುಂದಿನ ಬುಧವಾರ ಬಂದು ಫ್ಲೈಟ್ ಹತ್ತಿಸುತ್ತೇವೆಂದು ಹೇಳಿ ಅವರೂ ಹೊರಟರು. 
ಭಾಷೆ ಗೊತ್ತಿಲ್ಲದ ಊರೇ ತಿಳಿಯದೆಡೆ ಪರಿಚಯದವರೂ ಇಲ್ಲದ ಕಡೆ ಒಂದು ವಾರ ಕಳೆಯುವುದು ಹೇಗೆ ? ತಿಳಿಯಲಿಲ್ಲ. ಸ್ವಲ್ಪ ಹೊತ್ತಾದ ನಂತರ ಅಕಸ್ಮಾತ್ತಾಗಿ ರಮಾಳ ಅಕ್ಕ ಭಾವ ವಾಶಿ ಟೌನ್ ಶಿಪ್ ನಲ್ಲಿರುವುದು ತಿಳಿದ ಅವಳೇ ಸಂಪರ್ಕಿಸಿದಳು. ಅವಳ  ಅಕ್ಕ ಭಾವನೊಡನೆ  'ಅಳಿಯನ ಜೊತೆ ಗೆಳೆಯ' ಎಂದು ನಾನೂ ಹೊರಟೆ.  

ಬೊಂಬಾಯಿಯಲ್ಲಿ ಸ್ವಲ್ಪ ವೀಕ್ಷಣೆಯ ತಾಣಗಳನ್ನೂ ನೋಡಿ ಅವರ ಮನೆಯಲ್ಲೇ ಎರಡು, ಮೂರುದಿನ ಇದ್ದು ಬಂದೆವು. ಖಂಡಿತ ಅವರನ್ನು ಸ್ಮರಿಸಬೇಕು ! ಅಲ್ಲಿದ್ದು ಬಂದಮೇಲೆ , ಒಂದೆರಡು ಹಗಲು ಹೋಟೆಲ್ ನಲ್ಲೆ ಆಶ್ರಯ. ಆ ಹೋಟೆಲ್ ಊಟ ಬೇಸರ ತರಿಸಿತ್ತು. ಒಂದು ದಿನ ಹಗಲಿನಲ್ಲೇ ರಸ್ತೆಯ ಅಂಗಡಿಗಳ ಜಾಡು ಹಿಡಿದು ನಡೆಯುತ್ತಿದ್ದಾಗ , ಉಡುಪಿ ಹೋಟೆಲ್ ಎಂಬ ಬೋರ್ಡ್ ಕಾಣಿಸಿತು. ಅಲ್ಲೇ  ಏನಾದರೂ ತಿಂದು ಬರೋಣವೆಂದು ಹೋದೆವು. ಒಳಗೆ ಕುಳಿತಾಗ ನಾವು ಕನ್ನಡದಲ್ಲಿ ಮಾತಾಡಿದ್ದು ನೋಡಿ ,  ಅವರೂ ಕನ್ನಡದಲ್ಲೇ ಮಾತನಾಡಿದ್ದು ನಮಗೆ ಸ್ವರ್ಗಕ್ಕೆ ಮೂರೇ ಗೇಣು ! ಎಂಬಂತಾಯ್ತು.  ಖುಷಿಯಾಗಿ, ಬಿಸಿಬಿಸಿಯಾಗಿ ಊಟ ಮಾಡಿ ತೃಪ್ತಿಯಾಗಿ ಬಂದು ರೂಂ ಸೇರಿದೆವು. ಮರುದಿನವೂ ಅಲ್ಲೇ ತಿಂಡಿ ಊಟ ಎಂದು ಬೇರೆಯಾಗಿ ಹೇಳಬೇಕಿಲ್ಲ . 

ಅಂತೂ ಇಂತೂ ಬುಧವಾರ ಬಂತು. ಆಗ ಇದ್ದದ್ದೇ ವಾರಕ್ಕೊಂದು ಫ್ಲೈಟ್. ಪ್ರತೀ ಬುಧವಾರ. ಬೆಂಗಳೂರು HMT ಯ Mr. ಕುರುಪ್ ರವರು ಬಂದು ನಾವು ಏರೋಪ್ಲೇನ್  ಏರುವವರೆಗೆ ಅಲ್ಲಿದ್ದರು. ದುಬೈ ಮಾರ್ಗವಾಗಿ ನಾವು ಬಾಗ್ದಾದ್ ತಲುಪಿದಾಗ ಇಡೀ HMT ಯ ಕನ್ನಡಿಗರ ಗುಂಪು ರಣರಂಗದಿಂದ ಗೆದ್ದು ಬಂದ ವೀರರನ್ನು ಸ್ವಾಗತಿಸುವಂತೆ,  ನಮ್ಮನ್ನು ಎದುರುಗೊಂಡಿದ್ದರು  !!!!  HMT ಅಧಿಕಾರಿಗಳು ಕೊಟ್ಟ ಲಕೋಟೆ ಮತ್ತಾವುದೂ ಅಲ್ಲ, ನಮ್ಮವರ ಪ್ರಮೋಷನ್ ಲೆಟರ್ !! .. 

Friday, July 17, 2015

2002 ಕಾವೇರಿಯ ಸುತ್ತ ಮುತ್ತ.

🐝  2002 ಕಾವೇರಿಯ ಸುತ್ತ ಮುತ್ತ. 
ಕರಿಘಟ್ಟದ ನೃಸಿಂಹ, ನಿಮಿಷಾಂಬಾ, ಗೊಸಾಯೀ ಘಾಟ್ , ಬಲಮುರಿ.

ವರ್ಷಕ್ಕೊಮ್ಮೆ ಹೋಗುವ ಪ್ರವಾಸದಲ್ಲಿ ಇದೂ ಒಂದು. ನಾನು ಕುಮುದಾ, ನನ್ನ ಸಂಬಂಧಿ ರುಕ್ಮಿಣಿ, ಜಮ್ಮಿ, ಲತಾ, ಗೀತಾ, ಗೋದ, ರಾಜಿ, ಸಂಧ್ಯಾ, ಶಾಮನ ಹೆಂಡತಿ ವೀಣಾ,  ರಮೇಶನ ಹೆಂಡತಿ ಪ್ರಫುಲ್ಲ, 5 / 6 ಮಂದಿ ಪಡ್ಡೆಗಳು ಪ್ಲಾನ್ ಮಾಡಿದ್ದು ಕಾವೇರೀ ತೀರಕ್ಕೆ .
ಬೆಳಿಗ್ಗೆ ಆರು ಗಂಟೆಗೆ ನಾನು handy gas, ಕಾರ್ಪೆಟ್, ಕಿಚನ್ ಕಿಟ್, ನನ್ನ ಐಟಂ ಸಕ್ಕರೆ ಪೊಂಗಲ್ ಪ್ಯಾಕ್ ಮಾಡಿ ಟೆಂಪೋ ಟ್ರಾವೆಲ್ ಏರಿ  ಜಮ್ಮಿ ಮನೆಗೆ ಹೋದೆ. ಸುತ್ತಲಿನ ಕಸಿನ್ಸ್ ಎಲ್ಲ ಅವರವರ ತಿಂಡಿ ತೀರ್ಥಗಳೊಡನೆ ಬಸ್ ಏರಿ ವಿಜಯನಗರದಲ್ಲಿ ರುಕ್ಮಿಣಿ , ಕುಮುದ, ಗೀತ, ಬಂದು ಸೇರಿದರು. ಬೆಂಗಳೂರು ಬಿಟ್ಟಾಗ 7 ಗಂಟೆ. ಮದ್ದೂರಿನಲ್ಲಿರುವ  " ಬೆಟ್ಟದ ನರಸಿಂಹಸ್ವಾಮಿ " ಕ್ಷೇತ್ರ ತಲುಪಿದಾಗ  8.30.
ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಮದ್ದೂರಿಗೂ ಮುಂಚೆ ಎಡಭಾಗದಲ್ಲಿ, ದೊಡ್ಡದೊಂದು ಆರ್ಚ್ ಸಿಗುತ್ತದೆ. ಇದರೊಳಗೆ ಸಾಗಿದಾಗ 8 km ದಾರಿ ಸವೆಸಿದಾಗ  ಸಿಗುವುದೇ ಈ ಕ್ಷೇತ್ರ. ಪ್ರಶಾಂತ ಪರಿಸರ, ಪ್ರಕೃತಿ ಪ್ರಿಯರಿಗೆ ಹಬ್ಬ. ಮಳೆಗಾಲ ಮುಗಿದು ಇಲ್ಲಿಗೆ ಬಂದರೆ ಹಸಿರಿನ ಹಂದರ. ಹಸಿರಿನ ಮೇಲೆ ಬೀಸಿ ಬರುವ ಗಾಳಿಗಂತೂ ವಿಶೇಷ ಪರಿಮಳ. ಅರ್ಚಕರು ಬರುವುದು ತಡವಾದ್ದರಿಂದ ಇಡ್ಲಿ ಕಾಫಿ ಮುಗಿಸಿ ಶುಭ್ರ ಗಾಳಿಯಲ್ಲಿ ತಿರುಗಾಟ, ಸನ್ನಿಧಿ ದರ್ಶನ, ಸ್ತೋತ್ರ , ಮಂಗಳಾರತಿ, ತೀರ್ಥ, ಕಾಣಿಕೆ , ಮುಗಿಸಿ  ಕರಿಘಟ್ಟಕ್ಕೆ ಪ್ರಯಾಣ .
ಮಳೆ ಬಂದು ನಿಂತದ್ದರಿಂದ ಎಲ್ಲೆಲ್ಲೂ ಹಸಿರು, ಹಸಿರು , ಹಸಿರು. 
ಕವಿವಾಣಿಯೊಂದು ನೆನಪಿಗೆ ಬಂತು " ಹಚ್ಚ ಹಸಿರು ಪೈರುಪಚ್ಚೆ , ಇಲ್ಲಿ ಬಾಳ್ವುದೆಮ್ಮ ಇಚ್ಛೆ " ಆಲೆಮನೆಯ ಬೆಲ್ಲದ ಪರಿಮಳ ತೇಲಿ ಬಂದಾಗ ಮೂಗು ಸ್ವಲ್ಪ ದೊಡ್ಡದಾಗಿ ಇರಬಾರದಿತ್ತೇ ಅನ್ನಿಸಿದ್ದೂ ಉಂಟು ! ಕರಿಘಟ್ಟ ತಲುಪಿದಾಗ 11.30.  ವೇಂಕಟರಮಣಸ್ವಾಮಿ, ಯೋಗಭೋಗ ಶ್ರೀನಿವಾಸರ ದರ್ಶನ, ದೇವಾಲಯದ ಹಿಂಭಾಗಕ್ಕೆ ಹೋಗಿ ನೋಡಿದಾಗ, ಶ್ರೀರಂಗ ಪಟ್ಟಣ , ಕಾವೇರಿ, ನಿಮಿಷಾಂಬಾ ದೇವಸ್ಥಾನಗಳ ಪಕ್ಷಿನೋಟ ಮನಮೋಹಕ !! ನನಗೇನಾದರೂ ರೆಕ್ಕೆಗಳಿದ್ದಿದ್ದರೆ..?
ಬೆಟ್ಟದಿಂದಲೇ ಹಾರಿ ಹೋಗುವಷ್ಟು ಆತುರ. ವಾಸ್ತವಕ್ಕೆ ಬಂದೆ. ಸವಿ ನೆನಪಿಗಾಗಿ ಕ್ಲಿಕ್ , ಕ್ಲಿಕ್..ದೇವಾಲಯದಿಂದ ಹೊರಬಂದಾಗ ಕೆಂಪು ಬಿಳಿ ಪಟ್ಟೆ ಹಾಕಿದ ಹಳೆಯ ಮಂಟಪಗಳು, ಚೇತೋಹಾರೀ ಹುಣಿಸೇ ಮರಗಳು . ಜೊಂಪೆ ಜೊಂಪೆಯಾಗಿ  ಹುಣಿಸೇಕಾಯಿ. ಸರಿ !! ಎಳೆಯ ಹುಣಿಸೇಕಾಯಿಗಾಗಿ ಎಳೆಯರ, ಹಿರಿಯರ ಕೋತಿಯಾಟ !! ಇಲ್ಲೂ ಒಮ್ಮೆ ಕ್ಲಿಕ್, ಕ್ಲಿಕ್. ನಂತರ ನಾವು ಹೊರಟಿದ್ದು, ನಿಮಿಷಾಂಬಾ ದೇವಸ್ಥಾನಕ್ಕೆ ! ಬಿಸಿಲೇರಿತ್ತು. ಅರ್ಧ ಗಂಟೆ Q ನಲ್ಲಿ ಕಾಯಬೇಕಿತ್ತು. ಭಾನುವಾರದ ಭಕ್ತರು. ತಲೆ ಬಿಸಿಯಾಯ್ತು. ದೇವೀ ಸನ್ನಿಧಿ ಮಾತಾಡುವ  ಹಾಗಿಲ್ಲ .  ದರ್ಶನವಾದೊಡನೆ ಬಿಟ್ಟರೆ ಸಾಕು ಎಂಬಂತೆ ನದಿಯ ಬಳಿ ಓಡಿದೆವು. ತೆಪ್ಪದಲ್ಲಿ ತೇಲಾಡಿದೆವು. ನಂತರ ಗೋಸಾಯಿ ಘಾಟ್ !!
ಇಲ್ಲಿ ಎರಡು ಗಂಟೆಯ ವಿರಾಮ. ಕೋಸಂಬರಿ ತಯಾರಿಸಿ ಸರಿಯಾದ ಸ್ಥಳ ನೋಡಿ ಊಟಕ್ಕೆ ರೆಡಿ. ಅದಕ್ಕೂ ಮುಂಚೆ ಗೋದಾ ತಂದಿದ್ದ ಬಿಸಿಬಿಸಿ ಫಿಲ್ಟರಿನ ಕಾಫಿ. ತುಂಬಾ ಹಿತವಾಗಿತ್ತು. ನೀರಿನಲ್ಲಿ ಆಟವಾಡಿ ಊಟಕ್ಕೆ ಕುಳಿತಾಗ ಅದರ ಮಜವೇ ಮಜಾ !  ನಾಲ್ಕು ಗೋಡೆಯ ಮಧ್ಯೆ ಕುಳಿತು ಊಟಮಾಡಿ ಮಾಡಿ ಹೀಗೊಮ್ಮೆ ಪ್ರಕೃತಿಯ ಸಾನ್ನಿಧ್ಯದಲ್ಲಿ ಪುಣ್ಯನದಿ, ಹಳೇ ಮಂಟಪ, ಮರಗಿಡಗಳ ನಡುವೆ ಕುಳಿತು ಊಟ ಮಾಡಿದರೆ ಅದರ ಸವಿಯೇ ಬೇರೆ. ಮೊದಲು ಬಂದದ್ದು, ಕುಮುದಾ ಮನೆ ಬಿಸಿಬೇಳೆಭಾತ್, ನಂತರ ಲತಾ ಮನೆಯ ವಾಂಗೀಭಾತ್, ಗೀತಾ ಮನೆ ಸರ್ವಫಲ ರಸಾಯನ, ಪ್ರಫುಲ್ಲ ಮನೆ Mixture, ಚಿಪ್ಸ್ , ವೀಣಾ ಶಾಮ್ ತಂದಿದ್ದ Butter Sponge Cake, ಸ್ವೀಟ್ಸ್ , ಅಂದಹಾಗೆ ನಮ್ಮನೆ ಸಕ್ಕರೆ ಪೊಂಗಲ್, ಜಮ್ಮಿ ಮನೆ ಮೊಸರನ್ನ . ಅಷ್ಟೇ menu. ಇದರ ಮೇಲೆ ಜೀರ್ಣ ಆಗ್ಲಿ ಅಂತ ಎಲೆ ಅಡಿಕೆ !!  
ಮನುಷ್ಯ ತಿನ್ನಲು ಬದುಕಬೇಕೋ ? ಬದುಕಲು ತಿನ್ನಬೇಕೋ ? ಎಂಬ ಪ್ರಶ್ನೆ ಧುತ್ತೆಂದು ಮನಸ್ಸಿನಲ್ಲಿ ಮೂಡಿದ್ದು ಸಹಜವೇ. ಛೆ ! ಇಂದಿನ ದಿನವೇ ಶುಭದಿನವು ! ಅಂತಾ  ಖಾಲಿ ಮಾಡಿದ್ವಿ .
ನಂತರ ಪಾಸಿಂಗ್ ದಿ ಪಾರ್ಸೆಲ್ ಆಟ. ಮೂರು ಬಹುಮಾನ. ಕುಮುದಾಗೆ First prize , ಜಮ್ಮಿ Second Prize, ಲತಾ ಮಗ ಚಂದನ್ Third prize. ಬಹುಮಾನ ಕೊಟ್ಟವರು ನನ್ನ ಸಂಬಂಧಿ ಶ್ರೀಮತಿ ರುಕ್ಮಿಣಿ. ಅವರೇ ಅಂದಿನ ಚೀಫ್ ಗೆಸ್ಟ್ . ರಾಜ್ಯೋತ್ಸವ ವಿಶೇಷಕ್ಕೆ  !!!  ಈ ವೇಳೆಗಾಗಲೇ ಸಂಜೆ ನಾಲ್ಕಾಗಿತ್ತು. ಬಲಮುರಿಗೆ  ಹೊರಟೆವು. 
4.45. ಬಲಮುರಿ ತಲುಪಿದಾಗ ಎಲ್ಲೆಲ್ಲೂ ಜಲಧಾರೆ Best time ಅನ್ನಿಸ್ತು .. ನಾನು ಕುಮುದಾ ಶಿಶುಪದ್ಯ ಹೇಳಿಕೊಂಡು ನೀರಿನಲ್ಲಿ ನಲಿದಾಡಿದೆವು. ಚಿಕ್ಕ ಮಕ್ಕಳು  ಸ್ನಾನ ವೈಭವ ಕಂಡರು. ಬಿಸಿಬಿಸಿ ಟೀ ಮಾಡಿಕೊಂಡು ಎಲ್ಲರೂ ಹಿತವಾಗಿ ಹೀರಿದೆವು. 6. 20 ಕ್ಕೆ ಬಲಮುರಿಯಿಂದ ಬೆಂಗಳೂರಿಗೆ ಸವಾರಿ ! ಹರಟೆ, ಅಂತ್ಯಾಕ್ಷರಿ, ಚಿಕ್ಕನಿದ್ದೆ, ಮುಗಿದಾಗ  ರಾತ್ರಿ 8. 30. ರಾಜಿ, ಸಂಧ್ಯಾ ಸೇರಿ ಮಾಡಿದ್ದ ಚಪಾತಿ, ಗೊಜ್ಜು, ದಸರಾ ಮೆರವಣಿಗೆಯಂತೆ ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಸಾಗುತ್ತಾ ಹೋಯ್ತು. ಬೆಂಗಳೂರು ಸೇರಿದಾಗ, 9. 30. ಎಲ್ಲರನ್ನೂ ಅವರವರ ಮನೆಯ ಬಳಿ ಇಳಿಸಿ , ನನ್ನ ಮನೆ ಸೇರಿದಾಗ ರಾತ್ರಿ 11. ಪ್ರವಾಸ ಯಾವಾಗಲೂ ಮನಸ್ಸಿಗೂ, ದೇಹಕ್ಕೂ ಮುದ ಕೊಡುವ ಸಂಗತಿ.
ಹರಿಣಿ ನಾರಾಯಣ್ , Nov 1 , 2002. 

Monday, July 7, 2014

ಧನ್ಯವೀ ನುಡಿಗಳು !!


ಧನ್ಯವೀ ನುಡಿಗಳು !! ............ 

ದೇವನಿತ್ತಿಹ ರೂಪ ಕಕ್ಕುಲತೆಯೇಕೆ ? 
ಘಮಲಿಹುದೊ ಇಲ್ಲವೋ ಕಿತ್ತಾರು !! ಜೋಕೆ .. 

ಬಾಹ್ಯ ರೂಪವು ಗೌಣ ಆಂತರ್ಯವೇ ಸುಗುಣ 
ಬಾಳಿದುವೆ ಸವೆಸಲಿಕೆ , ಪಯಣವೂ ಸಾಗಲಿಕೆ.. 

ಕೊಟ್ಟ ಬಾಳನು ನೀನು ಕುಗ್ಗದೆಯೆ ನಡೆಸು 
ದೀನ ದಲಿತರ ಕಂಡು ಮರುಗಲಿಕೆ ಮನಸು.

ಒಂದೊಂದು ಜನುಮವೂ ಒಂದೊಂದು ಪಡಿಗಳು 
ಅರಿತು ನಡೆದರೆ ನಾವು, ಧನ್ಯವೀ ನುಡಿಗಳು !! 

ಮುಂಗಾರು ಮಳೆಯಲ್ಲಿ ಹನಿ ಹನಿ ಪ್ರವಾಸ !! ....

..ಮುಂಗಾರಿನ  ಮಳೆಯಲ್ಲಿ, ಹನಿ ಹನಿ ಪ್ರವಾಸ ,..... !!

              ಮಾರ್ಚ್, April , ಮೇ, ತಿಂಗಳು ಪೂರ್ತಿ  ಮದುವೆ, ಮುಂಜಿ, ಗೃಹಪ್ರವೇಶ,  ಈ ಓಡಾಟದಲ್ಲಿ  ಜನಸಾಗರ ನೋಡಿ, ನೋಡಿ, ಸಾಕಾಗಿತ್ತು.  ನಂತರದ  ಜೂನ್ ಜುಲೈ, ಮಳೆಗಾಲದ ಕಣ್ಣು ಮುಚ್ಚಾಲೆ !! ಹೇಗಾದರೂ  ಒಂದು  Monsoon  Tour  ಹೋಗ್ಬೇಕು ಅಂತ  ಯೋಚನೆ ಮಾಡ್ತಾ ಇದ್ವಿ .  ನಾನು, ಶಾರದಾ, ಮಾತಾ, ವಿಜಿ, ತಂಗ ,  ಸಾಗರದ ಕಡೆ  ಹೋಗಿಬರೋಣಾ ಅಂತ, ಆಗಸ್ಟ್ 1 ಕ್ಕೆ decide  ಮಾಡಿ, ಅರ್ಜೆಂಟಾಗಿ ಪ್ಯಾಕ್ ಮಾಡಿ, ರಾತ್ರಿ ಹೊರಡಬೇಕಿತ್ತು . ಅಷ್ಟರಲ್ಲಿ ತಂಗ ಫೋನ್ ಮಾಡಿ, " ಸಾಗರದ ಕಡೆ ತುಂಬಾ ಮಳೆ, ಹೊರಗೆ ಕಾಲಿಡೋಕೆ ಆಗಲ್ವಂತೆ, ಇನ್ನೊಂದ್ ವಾರ ನೋಡಿ ಹೊರಡೋಣಾ " ಅಂದ್ಲು.. ಸರಿ,  ಕ್ಯಾನ್ಸಲ್ ಆಯ್ತು.  ಈ ಮಧ್ಯೆ  ಮೈಸೂರಿಂದ  ಶ್ರೀದೇವಿ, ಕೇಶವ ಆಗಸ್ಟ್ ನಲ್ಲಿ  ಮೂರು ದಿನ ರಜಾ ಇದೆ.  ಎಲ್ಲಾದ್ರೂ ಹೋಗೋಣ್ವಾ ?  ಅಂತ ಫೋನ್ ಮಾಡಿದ್ರು.  ಅದು ಹೇಗೋ, ಕಾಲ್ ಮೇಲ್ ಕಾಲ್ ಹಾಕ್ಕೊಂಡ್ ಕೂತ್ಕೊಂಡ್ ,  ಹಾಗೇ ಹೀಗೇ  ಅಲ್ಲಿ ಇಲ್ಲಿ  ಕಾಲ್ ಮಾಡಿ  ಪ್ರವಾಸದ ಮಾರ್ಗ,  ತಂಗುವ ಸ್ಥಳ,  ಪ್ರೇಕ್ಷಣೀಯ ಸ್ಥಳ,  ಪ್ರವಾಸಿಗರು  ಎಲ್ಲ settle ಆಯ್ತು.  ದೈವಬಲವಿದ್ರೆ ಹಾಗೇ . ಎಲ್ಲಾ ಒದಗಿಬರುತ್ತೆ .
               " ಹುಯ್ಯೋ  ಹುಯ್ಯೋ ಮಳೆರಾಯ , ಹೂವಿನ ತೋಟಕೆ ನೀರಿಲ್ಲ "  ಇದು ನಂ ಶಾಲೇಲಿ ಹೇಳ್ಕೊಟ್ಟಿದ್ದು . ಭಾರತದಲ್ಲಿ  ಮಳೆಗೊಂದು ಪಾವಿತ್ರ್ಯತೆ, ಶ್ರೇಷ್ಠ ಸ್ಥಾನ !!  ಈಗಿನ ಕಾನ್ವೆಂಟ್ ನಲ್ಲಾದ್ರೆ ,  Rain Rain go away ಅಂತ ಉಪದೇಶ ಮಾಡ್ತಾರೆ,  ನಂ  ರೈತ ಕೇಳಿದ್ರೆ ಒಂದೇನು ?  ಎಷ್ಟೋ  sixer  ಬಾರಿಸೋದು ಗ್ಯಾರಂಟಿ. ಇರಲಿ,  ಇದು ಇಂಡಿಯನ್ culture ಗೋಸ್ಕರ ಹೇಳಿದ್ದು. ಈ ನಂ ಪದ್ಯಕ್ಕೆ   ಪದಶಃ ಅರ್ಥ  ಹುಡುಕ್ಬೇಕಂದ್ರೆ ,  ಕಾಂಕ್ರೀಟ್ ಸಿಟಿ ಬೆಂಗಳೂರಲ್ ಕೂತು  ಆಕಾಶದ ಕಡೆ  ತಲೆ ಎತ್ತಿದ್ರೆ  ಬರೀ ಕತ್ತುನೋವು ಬರೋದಷ್ಟೇ ಲಾಭ. ನಿಜವಾಗಿ  ಮಳೆ ಸುಖ  ಅನುಭವಿಸ್ಬೇಕಂದ್ರೆ ಖಂಡಿತಾ  ಮಲೆನಾಡಿಗೆ  ಪ್ರವಾಸ ಹೋಗ್ಬೇಕು. ಮೊಣಕಾಲ್ ತನಕ ಸೀರೆ ಎತ್ತಿ , ಛತ್ರಿ ಬಿಚ್ಚಿ, ಇದ್ರೆ  rain coat ಹಾಕ್ಕೊಂಡು , ರೆಪ್ಪೇ ಮೇಲ್ ಸುರಿಯೋ ಮಳೇ ನೀರನ್ನ   ಒರೆಸ್ಕೊಂಡು , ಆಕಾಶದಿಂದ ಧಾರೆಯಾಗಿ ಹರಿಯೋ ಮಳೆನೀರಿನ್ ಪರದೆ ಸರಿಸಿ,  ಅಲ್ಲಿ ಕಾಣೋ ಮಸಕು ಮಸಕಾದ ಬೆಟ್ಟ, ಬಯಲು, ಝರಿ, ತೊರೆ ,  ಕಣ್ಣುಮುಚ್ಚಾಲೆ ಆಡೋ ಬೆಳಕು,  ಸೂರ್ಯ , ಮರ, ಗಿಡ, ಬಳ್ಳಿ,  ಗೂಡುಗಳಲ್ಲಿ  ಪಟ ಪಟಾ  ಅಂತ ರೆಕ್ಕೆ  ಬಡಿಯೋ ಪಕ್ಷಿ ,  ಇದನ್ನೆಲ್ಲಾ  ಒದ್ದಾಡ್ಕೊಂಡ್  ನೋಡೋದೇ ಮಜಾ !! 

          ಒಟ್ಟು ೩೮ ಜನ, ೩ ಟೆಂಪೋ ಟ್ರಾವೆಲ್ ರೆಡಿಯಾಗಿ ಆಗಸ್ಟ್ ೧೨ ರಾತ್ರಿ ನನ್ನ ಮಗಳು, ಮೊಮ್ಮಗ, ಬಂದಮೇಲೆ ೧೧ ಗಂಟೆಗೆ ಹೊರಟಿದ್ದಾಯ್ತು. ಅತ್ತ ಮೈಸೂರಿನಿಂದ, ಕೇಶವನ ಸಂಸಾರ ಕಾರಿನಲ್ಲಿ ಹೊರಟು, ಬೆಳಿಗ್ಗೆ ಶಿವಮೊಗ್ಗೆ ಯಲ್ಲಿ, ಸೇರಿದೆವು. ಅಲ್ಲಲ್ಲೇ ಇದ್ದ ಹೋಟೆಲ್ ಗಳಲ್ಲಿ ರೂಂ ಮಾಡಿ,  ನಿತ್ಯಕರ್ಮ ಮುಗಿಸಿ,  ಹೊರಟಿದ್ದು " ಕೂಡಲಿ " ಗೆ.  ಇದು  ತುಂಗಾ, ಭದ್ರಾ ನದಿಗಳ ಸಂಗಮಕ್ಷೇತ್ರ.  ಇಲ್ಲಿ  ಶಂಕರಮಠ ,  ಶಾರದಾದೇವಿ ಗುಡಿ,  ಹೊಯ್ಸಳ ಶಿಲ್ಪದ   ಶಿವಾಲಯ, ಚಿಂತಾಮಣಿ ನರಸಿಂಹ ಗುಡಿ, ಇದೆ.  ದೇವಾಲಯದ ಮುಂಭಾಗದಿಂದ  ಭದ್ರಾ,  ಹಿಂಭಾಗದಿಂದ ತುಂಗಾ ನದಿಯೂ ಬಂದು   ಸೋಪಾನ ಕಟ್ಟೆಯ ಬಳಿ,  ಸಂಗಮಿಸುತ್ತದೆ.  ಮಳೆಗಾಲವಾದ್ದರಿಂದ ತುಂಗಾ ಕೆಂಬಣ್ಣದಲ್ಲೂ , ಭದ್ರಾ  ತುಸು ಕಪ್ಪಾಗಿಯೂ ಇತ್ತು.  ಕೆಲವರಿಗೆ  ನೀರಿನಲ್ಲಿ ಆಡುವ,  ಕೆಲವರಿಗೆ ಮೌನ ವೀಕ್ಷಣೆ, ಕೆಲವರ ಕೈಯ್ಯಲ್ಲಿ   ಕ್ಯಾಮೆರ, ವೀಡಿಯೋ ಸಂಭ್ರಮ.  ಸುಮಾರು ೯೦ ನಿಮಿಷ ಅಲ್ಲಿದ್ದು,  ಶಿವಮೊಗ್ಗೆಯಲ್ಲಿ   ಊಟ ಮುಗಿಸಿ ಹೊರಟಿದ್ದು, " ತ್ಯಾವರೆಕೊಪ್ಪಕ್ಕೆ" . ಇಲ್ಲಿ ಸಿಂಹಧಾಮ . ಸ್ಪೆಷಲ್ ಬಸ್ಸಿನಲ್ಲಿ  ಒಬ್ಬರಿಗೆ ೨೫ ರೂ  Entry Fee.  ಸರ್ಪಗಳು, ಕರಡಿ, ಹುಲಿ , ಚಿರತೆ,  ಎಲ್ಲ ಚೆನ್ನಾಗಿತ್ತು. - ಒಳಗಿತ್ತಲ್ಲಾ ಅದಕ್ಕೇ !!   ಆಮೇಲೆ " ಗಾಜನೂರು ಆಣೆಕಟ್ಟು. " ಇಲ್ಲಿ ಹೊಸ ಅಣೆಕಟ್ಟಿನ ಕಾಮಗಾರಿ. ಟೆಂಪೋ  ದೂರದಲ್ಲೇ ನಿಲ್ಲಿಸಿ, ನಡೆದೆವು.  ೨೨ ಗೇಟ್ ಗಳಿದ್ದು  ಎಲ್ಲವನ್ನೂ ತೆರೆದಿದ್ದು  ನೀರು ಭೋರ್ಗರೆಯುತ್ತಿತ್ತು.  ಮಳೆಗಾಳಿಯ ಹೊಡೆತಕ್ಕೆ , ಹುಚ್ಚು ರಭಸ,  ಸಿಕ್ಕಿದ್ದನ್ನೆಲ್ಲಾ ಕೊಚ್ಕೊಂಡ್ ಹೋಗ್ತಾ ಇತ್ತು.  ಜರ್ಕಿನ್ ಹಾಕಿ  ಕೊಡೆ ಹಿಡಿದು  ತಿರುಗಿದ್ದೇ ತಿರುಗಿದ್ದು .  ವಾಪಸ್ ಬರುವಾಗ, " ಮಂಡಗದ್ದೆ ಪಕ್ಷಿಧಾಮ."  ಹರಿವ ಕೆಂಪು ನೀರು,  ಹಸಿರು ಮರಗಳು ,  ಮಳೆಹನಿಗೆ ಪಟಪಟ ರೆಕ್ಕೆ ಬಡಿಯುವ ಬೆಳ್ಳಕ್ಕಿಗಳು,  ಇವೆಲ್ಲ ನೋಡಿದರೇ ಚೆನ್ನ.  ಶಿವಮೊಗ್ಗೆಗೆ ರಾತ್ರಿ ಬಂದು,  ನಮ್ಮ ಬಂಧು  ನಟರಾಜ್ ರವರ ಮನೆಯಲ್ಲಿ, ಎಲ್ಲರಿಗೂ  ತಿಂಡಿ ಕಾಫಿ ಸಮಾರಾಧನೆ.
ನಂತರ , ನಮ್ಮ ಟೆಂಪೋದವರೆಲ್ಲ  ರಾತ್ರಿಹೊರಟು  ಸಾಗರದಲ್ಲಿ  Varadashree  ಹೋಟೆಲ್ ನಲ್ಲಿ ತಂಗಿದೆವು . ಡಬಲ್ ರೂಂಗೆ  ದಿನಕ್ಕೆ ೨೫೦ ರೂ. ಊಟಾನೂ ಚೆನ್ನಾಗಿತ್ತು.  ಮಿಕ್ಕೆರಡು ಗಾಡಿಗಳು, ಬೆಳಿಗ್ಗೆ ೭ ಕ್ಕೆ, ಬಂದು ಸೇರಿದರು . ಆಗಸ್ಟ್ ೧೪ . ಆದಿತ್ಯನ ಬರ್ತ್ ಡೇ. ಟಿಫನ್  ಮಾಡಿ, ೩೦ ಕಿಮೀ  ದೂರದ " ಸಿಗಂಧೂರಿಗೆ " - ಹೊರಟೆವು.
               ಹೋಗುವ ಮಾರ್ಗದಲ್ಲಿ , ನೀನಾಸಂ ಸಂಸ್ಥೆಯ ರೂವಾರಿ,  ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ  ಕೆ. ವಿ. ಸುಬ್ಬಣ್ಣನವರ, ಹೆಗ್ಗೋಡು ಇದೆ.   ನಮ್ಮೂರಿನಲ್ಲಿರುವ, " ದೇಶೀ " ಅಂಗಡಿಗಳಿಗೆ,  ಸೀರೆ , ಚೀಲ, ಪಂಚೆ,  ಮುಂತಾದ ವಸ್ತ್ರಗಳನ್ನು  ನೇಯುವ   "ಚರಕ" ಗ್ರಾಮ  ಇರುವುದೂ  ಇಲ್ಲೇ. ಮುಂದೆ  ಶರಾವತಿಯ  ವಿಶಾಲ ಹರವು.  ಹಸಿರು ಮಿಶ್ರಿತ  ನೀಲ ಬಣ್ಣದ ನದಿ ,  ಮಧ್ಯೆ ಮಧ್ಯೆ ನಡುಗಡ್ಡೆಗಳು,  ಅದರಲ್ಲಿ   ಕಡು ಹಸಿರಿನ ಮರಗಳು. ನೀರಿನ ಹರಿವು , ಆಳ ಮಳೆಗಾಲವಾದ್ದರಿಂದ ಪ್ರಬಲ . ಇಲ್ಲೊಂದು ಪುಟ್ಟ ಕಡವು. ದೊಡ್ಡ ಸರಕಾರೀ ಲಾಂಚ್ ಒಂದು ಜನರನ್ನು, ವಾಹನಗಳನ್ನು, ಸಾಮಾನು ಸರಂಜಾಮನ್ನು  ಸಾಗಿಸಲು  ನಿರಂತರವಾಗಿ  ಎರಡೂ ದಡಗಳಿಗೆ  ತಿರುಗಾಡುತ್ತಿರುತ್ತದೆ . ವ್ಯಕ್ತಿಯೊಬ್ಬರಿಗೆ  ೧ ರೂ , ವಾಹನವೊಂದಕ್ಕೆ  ೧೫ ರೂ ಶುಲ್ಕ.  ಪ್ರಯಾಣಿಸುವ ಕಾಲ,   ೩೦ ರಿಂದ ೪೦ ನಿಮಿಷ. ಎಲ್ಲರಿಗೂ ಏನೋ ಹಿಗ್ಗು, ಕೇಶವನ ಕಾರನ್ನೂ  ಏರಿಸಿದ್ದಾಯ್ತು.  ಆ ಪುಟ್ಟ ಹಡಗಿನ ಪ್ರಯಾಣ,  ಮರೆಯದ ಅನುಭವ . ಕಟ್ಟೆಯ ತುದಿಯಲ್ಲಿ ಜಾಗ ಹಿಡಿದು ಸುತ್ತಲಿನ ಸೊಬಗಿನ ವೀಕ್ಷಣೆ, ಮಳೆಗಾಳಿಗೆ ನನ್ನ ಛತ್ರಿ , ಡಿಶ್ antenaa ಆಗಿದ್ದು super . ತಂಡ ತಂಡವಾಗಿ ಫೋಟೋ ತೆಗೆದಿದ್ದೂ ತೆಗೆದಿದ್ದೇ. ಆ ಬದಿಯ ದಡದಲ್ಲಿ ಇಳಿದಾಗ , ಅಲ್ಲೊಂದು ಬೋರ್ಡ್ " ಕಳಸವಲ್ಲಿ ಪೋಸ್ಟ್ ". ಇದ್ದಿದ್ದೇ  ಮೂರೋ ನಾಲ್ಕೋ ಮನೆ.   ಅದರಲ್ಲೊಂದು, ಹೋಟೆಲ್.   ೪೦ ಜನ ಊಟಕ್ ಬರ್ತೀವಿ ಅಂತ ಹೇಳಿ,  ಬಸ್ನಲ್ಲಿ   ದೇವಸ್ಥಾನಕ್ಕೆ ಹೊರಟ್ವಿ . ಒಬ್ಬರಿಗೆ ೧ ರೂ.ಇದ್ದ ದೂರ, ೪ ಕಿ.ಮೀ. ಅವರವರ ಭಾವಕ್ಕೆ ತಕ್ಕಂತೆ ಪೂಜೆ ಮುಗಿಸಿ, ಶ್ರೀ ಚೌಡೆಶ್ವರೀ ಸಂನಿಧಿಯಿಂದ  ಹೊರಬಂದಾಗ ಬಸ್ ಹೊರಟುಹೋಗಿತ್ತು,  ಮಾಡೋದೇನು ?   ಚಿಟಿ ಚಿಟಿ ಮಳೆಯಲ್ಲಿ  ರಸ್ತೆ ಬದಿ ತೊರೆಯಲ್ಲಿ  ಕಾಲಾಡಿಸ್ತಾ  ೪ km ನಡೆದದ್ದೇ  ಗೊತ್ತಾಗ್ಲಿಲ್ಲ . ಕೇಶವನ ಕಾರು ,  ಅತಿ ಚಿಕ್ಕವರ,  ದೊಡ್ಡವರ ಪಿಕಪ್ ,  ಡ್ರಾಪ್ ಗಳಲ್ಲೇ  busy ಯಾಗಿತ್ತು.  ಕಳಸವಲ್ಲಿ ಹೋಟೆಲ್ ನಲ್ಲಿ   ಅಷ್ಟು ಜನ  ಬಂದೇ ಇರ್ಲಿಲ್ಲ  ಅನ್ಸತ್ತೆ.  ಊಟದೆಲೇನೆ  ಕಮ್ಮಿಇತ್ತು.  ಪಡ್ಡೆ ವಯಸ್ನೋರೆಲ್ಲ ಒಂದೆಲೇಲಿ,  ಮೂರ್ಮೂರು ಜನ ಊಟ. ಮುತ್ತುಗದೆಲೆಯ ಮೇಲೆ,  ಬಿಸಿಬಿಸಿ ಅನ್ನ ,  ಸೌತೆಕಾಯಿಯ  ಘಮಘಮಿಸುವ ಸಾರು,  ಹಬೆಯೊಡನೆ  land ಆದಾಗ  ನಡೆದ ಆಯಾಸವನ್ನೂ ಮರೆತು , ಬಡಿಸಿದ್ದ ಊಟವೆಲ್ಲ  traffic jam ಆಗದೆ , ೮೦ km  ಸ್ಪೀಡಲ್ಲಿ  ಹೋಗ್ತಾನೆ ಇತ್ತು. ಹೋಟೆಲ್ ಅನ್ನೋ ಗುಡಿಸಲು ಭರ್ತಿ  ನಾವೇ೪೩ ಜನ. ಶಶಿಕುಮಾರೂ ಸಹ  ಬಡಿಸೋಕೆ ನಿಂತಿದ್ರು . ತದಿಯಾರಾಧನೆ  ನೆನೆಪಾಗಿರ್ಬೇಕು. ಲಾಂಚ್ ಬರಲು ಇನ್ನೂ ಟೈಮ್ ಇತ್ತು. ಎಲ್ರಿಗೂ ಒಂದ್ ರೌಂಡ್ ಟೀ ನೂ ಆಯ್ತು. ಪುನಃ ಲಾಂಚ್  ಪ್ರಯಾಣದ ಸುಖ ಅನುಭವಿಸಿ , ನಮ್ಮ ನಮ್ಮ ವ್ಯಾನ್ ಏರಿದೆವು. ಮುಂದೆ " ಇಕ್ಕೇರಿ " . 

         ಇಕ್ಕೇರಿ,  ಅಘೋರೇಶ್ವರ  ದೇವಾಲಯ. ವಾಸ್ತು ಶೈಲಿ ವಿಭಿನ್ನ, ಕೆಳದೀ ಸಂಸ್ಥಾನಕ್ಕೆ  ಸೇರಿದ ಕಾಲ. ೧೫೬೦ ರಿಂದ ೧೬೪೦. ವಿಜಯನಗರ, ದ್ರಾವಿಡ, ಶೈಲಿಯ ಕಟ್ಟಡ . ಕೆಂಪು granite ಶಿಲೆಯಿಂದ ಕಟ್ಟಿದ್ದಾರೆ. ಸುತ್ತಮುತ್ತ ಹಸಿರು, ಗದ್ದೆ , ಮರಗಳು, ದೊಡ್ಡ ನಂದಿ ಎಲ್ಲಾ ಚೆನ್ನ. ಇಲ್ಲಿ ಅನಾನಸ್ ಹಣ್ಣು ಹೇರಳ. ಇದು ಸಾಗರದಿಂದ ೬ km. ನಂತರ ಹೊರಟಿದ್ದು," ವರದಾಮೂಲ " ಕ್ಕೆ.
           ಹೆಸರೇ ಹೇಳುವಂತೆ,  ಇದು ವರದಾನದಿಯ ಉಗಮ ಸ್ಥಾನ . ಇಲ್ಲಿ ವರದಾಂಬ ಸನ್ನಿಧಿ.  ವರದಾಂಬೆಯ ಪಾದದಡಿಯಿಂದ, ವರದಾನದಿ  ಗುಪ್ತಗಾಮಿನಿಯಾಗಿ ಬಂದು ಪಕ್ಕದ ವರದತೀರ್ಥಕ್ಕೆ ಸೇರುತ್ತಾಳೆ . ಇಲ್ಲಿಂದ ಪುನಃ ಗುಪ್ತಗಾಮಿನಿ . ಆಕೆ ಕಾಣಿಸಿಕೊಳ್ಳುವುದು ಬನವಾಸಿಯಲ್ಲಿ , ಮಧುಕೇಶ್ವರನ  ಸನ್ನಿಧಿಯ ಬಳಿ . ಇಲ್ಲಿಂದ ಜನೋಪಕಾರ ಮಾಡಿ, ತುಂಗಭದ್ರೆಗೆ ಸೇರಿಕೊಳ್ಳುತ್ತಾಳೆ . ಹಸಿರು ಗುಡ್ಡಗಳ ನಡುವಿನ ಪ್ರಶಾಂತ ತಾಣ.  ಅಲ್ಲಿ ನಮ್ಮ ಕ್ಯಾಮೆರಾಗಳು ಕಣ್ಣು  ಹೊಡೆದಿದ್ದೇ    ಹೊಡೆದಿದ್ದು !!
         ಸಾಗರಕ್ಕೆ ವಾಪಾಸಾಗಿ  ಕಾಫಿ ಕುಡಿದು," ಕೆಳದಿ " ಗೆ ಹೊರಟೆವು. ಮಿಕ್ಕೆರಡು ಟೆಂಪೋದವರು  ಜೋಗದ ದಾರಿ ಹಿಡಿದು  ಅಲ್ಲಿ ತಂಗಿದ್ದರು. ನಾವು  ೫ km ದೂರದ   ಕೆಳದಿ ಸೇರಿದಾಗ ಸಂಜೆ ೫.೩೦. ಆಗಲೇ ಕತ್ತಲಿನ ತೆರೆ ಬೀಳುತ್ತಿತ್ತು . ಇಲ್ಲಿ ರಾಮೇಶ್ವರನ ಗುಡಿ. ವಿಭಿನ್ನ ಶೈಲಿಯಲ್ಲಿರುವ ಈ  ದೇವಸ್ಥಾನಕ್ಕೆ  ಹಿಂಭಾಗದಿಂದ ಪ್ರವೇಶ ಮಾಡುವ ಪದ್ಧತಿ . ಕೆಂಪುಚಂದನದ ಮೇಲ್ಚಾವಣಿ,  ಗಂಡಭೇರುಂಡ , ವಾಸ್ತುಪುರುಷ, ಅಷ್ಟದಿಕ್ಪಾಲಕರು ಇಲ್ಲಿನ ವಿಶೇಷ ಶಿಲ್ಪ. ದೇವಸ್ಥಾನದ  ಪ್ರತಿ ಅಂಕನವೂ ವಿಶೇಷ, ವಿಭಿನ್ನ.  ಹಿಂದಿರುಗುವಾಗ, ಪೇಟೆ ಬೀದಿಯಲ್ಲಿ ಮಲ್ನಾಡ್ ಉಪ್ಪಿನಕಾಯಿ,   ಶ್ರೀಗಂಧದ ಕೆತ್ತನೆಯ  momento ಕೊಂಡು,  ಹೋಟೆಲ್ ನಲ್ಲಿ ಊಟ, ಹರಟೆ ಮುಗಿಸಿ ಮಲಗಿದೆವು. ಬೆಳಿಗ್ಗೆ, ೭.೩೦ ಕ್ಕೆ " ಜೋಗದ " ದಾರಿ ಸವೆಸಿದೆವು. ಉದ್ದಕ್ಕೂ  ವರುಣನ ಆಶೀರ್ವಾದ !!  ಉಳಿದ ತಂಡವೂ ಸೇರಿ ಫಾಲ್ಸ್ ನೋಡಲು ಹೋದೆವು. ಫಾಲ್ಸ್ ಕಾಣದಷ್ಟು ಮಳೆ, ಒಮ್ಮೊಮ್ಮೆ ಮಂಜು.  ನನ್ನ ಮೊಮ್ಮಗ ಪಾರ್ಥ , ಇದು ಜೋಗ್ ಫಾಲ್ಸೋ ? ಫಾಗ್ ಫಾಲ್ಸೋ? ಅಂದ. ಎಲ್ಲರ ನಗುವೇ  ಅವನಿಗೆ ಉತ್ತರವಾಯ್ತು . ಸೂರ್ಯನ ಕೃಪೆಯಿಂದ  ಒಮ್ಮೊಮ್ಮೆ ಕಂಡ ಜಲಪಾತದ ದೃಶ್ಯ ಚೇತೋಹಾರಿ !! ಕಣ್ ಸೆಳೆಯುವ ನೋಟ.
ನೆನಪಿಗೆ ಬಂದಿದ್ದು, ಕಡೆಂಗೋಡ್ಲು ಶಂಕರ ಭಟ್ಟರ ಕವನ .

    ಪಡುವಣ ತೀರದ ಕನ್ನಡ ನಾಡಿನ ಕಾರ್ಗಾಲದ ವೈಭವವೇನು ?
    ಚೆಲ್ಲಿದರನಿತೂ ತೀರದ ನೀರಿನ ಜಡದೇಹದ ಕಾರ್ಮುಗಿಲೇನು ?
    ಕೆರೆಗಳನುಕ್ಕಿಸಿ ತೊರೆಗಳ ಸೊಕ್ಕಿಸಿ, ಗುಡ್ಡವ ಬೆಟ್ಟವ ಕೊರೆಕೊರೆದು ,
    ಕಡಲಿನ ತೆರೆಗಳ ರಿಂಗಣ ಗುಣಿಯಿಸಿ, ಮೊರೆ ಮೊರೆವುದದೋ ಸುರಿಸುರಿದು !!

೨ ಗಂಟೆ ಕಾಲ  ಅಲ್ಲಿದ್ದು, ಮಳೆಸ್ನಾನ ಮಾಡಿ, ಇನ್ನೂ ವಿಶೇಷ ಸ್ಥಳಗಳನ್ನು ನೋಡಲು ಹೊರಟೆವು. ನಮ್ಮವರ ಕಸಿನ್  ಬಿಳಿಗಿರಿ, ಅಲ್ಲೇ ಉದ್ಯೋಗಸ್ಥರು. ಅವರ ಜೊತೆ  ರಾಣೀ ಹಳ್ಳ  , ಹೆಂಜಕ್ಕಿ ಹಳ್ಳ, ಆನೆಬಯಲು, ಬಸವನ ಬಯಲು,  ನೋಡಿದೆವು.

                  ಪ್ರಕೃತಿ ಚೆಲುವು ಇಲ್ಲಿ ನೂರ್ಮಡಿ.

                " ಅತಿ ಗಾಂಭೀರ್ಯದಿ ಸಾರುವುದೇನು ? ಉದ್ಧಟತನದಿಂ ಹಾರುವುದೇನು ?
                  ಲತೆಯ ವಿಲಾಸದ ಲಾಸ್ಯವದೇನು ? ಶೈಲಾಗ್ರದಿಂ ನೀ ಬೀಳುವುದೇನು ?   "
                                                                                                -- ಡಿ. ವಿ.ಜಿ.
ಶರಾವತಿಯ   ಸೊಗಸೇ ಸೊಗಸು. ಎಷ್ಟಾದರೂ ಮಲೆನಾಡಿನ ಮಗಳು !!  ಬಿಡಲು ಮನಸ್ಸಿಲ್ದೆ ಬಿಟ್ಟಿದ್ದಾಯ್ತು. ಇಲ್ಲಿಂದ  ಮೈಸೂರಿನ ತಂಡ ಹಿಂತಿರುಗಿದರು. ಮಿಕ್ಕ ನಾವೆಲ್ಲಾ ತಿರುಗಿದ್ದು,  " ವರದನ ಹಳ್ಳಿ , ಶ್ರೀಧರಾಶ್ರಮ" ಕ್ಕೆ. ತಲುಪಿದ್ದು , ೧೨.೩೦ ಕ್ಕೆ. ಮಠದಲ್ಲಿ ಊಟದ ಸಮಯ .  ಆಗಸ್ಟ್ 15 ,  ಸ್ವಾತಂತ್ರ್ಯೋತ್ಸವಕ್ಕಾಗಿ , ವಿಶೇಷ ಸಿಹಿಯೂಟ. ಚೆನ್ನಾಗಿ ಸೆಳೆದು , ಶ್ರೀಧರ ತೀರ್ಥ, ಶ್ರೀಧರ ಗುಡ್ಡ ನೋಡಿದೆವು. ಧರ್ಮಧ್ವಜ , ತಪೋವನ ಸ್ಥಳ, ಎಲ್ಲ ನೋಡತಕ್ಕದ್ದೆ.. ರಾತ್ರಿ  ತಿಪಟೂರಿನಲ್ಲಿ  ಊಟಕ್ಕಿಳಿದು ಹತ್ತಿರದ ಮನೆಗಳಿಗೆ ತಕ್ಕಂತೆ  ಟೆಂಪೋನಲ್ಲಿ ವ್ಯವಸ್ಥೆ ಮಾಡ್ಕೊಂಡು , ಬೆಂಗಳೂರು ಸೇರಿದೆವು. ಮನೆ ಸೇರಿದ್ದು ರಾತ್ರಿ ೨.೩೦. ಇದು ನಮ್ಮ ಹನಿ ಹನಿ ಪ್ರವಾಸದ ಕಥೆ !!

Friday, April 4, 2014

ಚೌಪದಿಗಳು

2008  --  7 . ಬನ್ನೇರುಘಟ್ಟ Time pass  !!  
ಹಿತ್ತಲಲಿ ನಾ ಕುಳಿತು ಎಣಿಸಿದ್ದೆ ಸೀಬೆಫಲ, 
ಹತ್ತು ದಿನಗಳ ಬಳಿಕ ಕೀಳಬಹುದೆಂದು.
ಅಳಿಲು ಬರದಿರಲೆಂದು ಚೀಲಗಳ ನಾ ಕಟ್ಟೆ, 
ಟೊಂಗೆ ಮುರಿದಾ ಮಂಗಕುಪಹಾರವಾಯ್ತಿಂದು !! 

2013  --  8.  ಶ್ವಾನ - ಶಾಪ 
ಎಲ್ಲರೊಲುಮೆಯ ಅತಿಥಿ ಬಂದಿತ್ತು ಶ್ವಾನ 
ಪುಟಿಪುಟಿದು ಓಡುತ್ತ ಬಾಲವನ್ನಾಡಿಸುತ 
ದೊಡ್ಡದಾಗುತ್ತಲೇ ಸಿಕ್ಕದ್ದು ಕಚ್ಚಿರಲು 
ಶ್ವಾನವಿತ್ತವಗೆ ನಾ ಹಾಕಿದೆನು ಶಾಪ ! 

ಚೌಪದಿಗಳು.....


2009 --  4 . ಬಟೂರೆ
ಪಕ್ಕದಾ ತಾಟಿನಲಿ ಪೂರಿ ಗಾತ್ರವ ಕಂಡು , 
ತರಲು ಹೇಳಿದೆ  ನಾ , ಒಂದು ಪ್ಲೇಟ್ ಪೂರಿ . 
ಹತ್ತು ನಿಮಿಷವ ಕಳೆದು , ಅಂಗೈ ಗಾತ್ರದಿ ಬರಲು 
ಎಣಿಸಿದ್ದೆ ತಪ್ಪಾಯ್ತು,  ಪಕ್ಕದ್ದು ಬಟೂರೆ    !! 

2008 --  5 . ಚೆನ್ನ ......... 
ಹೊಸತು ಹೊಸತೀ ಮನೆಯು ಮನೆಯ ಒಡೆಯಗೆ ಚೆನ್ನ 
ಮನೆಯನಾಳುವ ಪರಿಯು ಅವನ ಮಡದಿಗೆ ಚೆನ್ನ 
ಆರಾರಿಗಾವಾಗ ಏನೇನು ಚೆನ್ನವೋ ?
ದೈವ ಪೊರೆಯಲಿ ನಿಮ್ಮ ನಮಗದುವೆ ಚೆನ್ನ ! 

2010. --  6. ಮಥುರಾಸೇವೆ 
ತೀರ್ಥಯಾತ್ರೆಯ ಸಮಯ ಬಸವಳಿದು ನಾನಂದು 
ಕೃಷ್ಣನಾಲಯದೆದುರು ಮರದ ಬಳಿ ಕುಳಿತಿರಲು 
ಭಕ್ತಾದಿಗಳ ಗುಂಪು ಮೆಟ್ಟು ಬಿಚ್ಚಿದರಲ್ಲೇ 
ಕಾಯುತಿದ್ದುದೆ ಸೇವೆ , ಹೀಗಿತ್ತು ಸ್ಥಳಮಹಿಮೆ ... !!