Saturday, July 18, 2015

Iraq - Iran War ! Face to Face !! 1980 ( ಅನುಭವ )

Iraq - Iran War ! Face to Face !! 1980 ( ಅನುಭವ )

ನಾನು ಬಾಗ್ದಾದ್ ಗೆ ಹೋದಮೇಲೆ ಅಲ್ಲಿನ ಜನಜೀವನ, ಸಂಖ್ಯೆಗಳು, ಚಲಾವಣೆಗೆ ಬೇಕಾದ ನೋಟುನಾಣ್ಯಗಳ ಪರಿಚಯ, ತರಕಾರಿ ಹಣ್ಣು ಮಳಿಗೆ ಸಾಮಾನುಗಳ ಹೆಸರು, ಸುತ್ತ ಮುತ್ತಲಿರುವ ಅಂಗಡಿ ಮುಗ್ಗಟ್ಟುಗಳ ಮಾರ್ಗ, ಇವುಗಳನ್ನೆಲ್ಲಾ ತಿಳಿದುಕೊಳ್ಳುವ ವೇಳೆಗೆ ಸುಮಾರು ದಿನ ಹಿಡಿಯಿತು .
ಈ ಮಧ್ಯೆ ಎರಡು ಬಾರಿ ಮಕ್ಕಳು ಬಂದಿದ್ದು ಬಾಗ್ದಾದ್ ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿದ್ದೂ ಆಯ್ತು. ಹಬಾನಿಯಾ ಲೇಕ್, ತರ್ತರ್ ಲೇಕ್, ಸಮರ್ರ, ಕರ್ಬಲ ಮಾಸ್ಕ್, ಲುನಾರ್ ಪಾರ್ಕ್, ಮನ್ಸೌರ್ ಮಾರ್ಕೆಟ್, ಆಫ್ರಿಕನ್ ಸ್ಟೋರ್, ಶಾರ್ಜಾ ಮಾರ್ಕೆಟ್, ಟೈಗ್ರಿಸ್ ರಿವರ್, ಮಸಬ ಪಾರ್ಕ್, ಮುಖ್ಯವಾಗಿ - ಬ್ಯಾಬಿಲೋನ್ !  
ಭಾಷೆ ಗೊತ್ತಿಲ್ಲದ ಸ್ಥಳದಲ್ಲಿ ಎಡವಟ್ಟಾಗುತ್ತಿದ್ದುದೂ ಉಂಟು. ಹಾಗೊಮ್ಮೆ ತರಕಾರಿ ತರಲು ಹೋದಾಗ ಕಣ್ಣಿಗೆ ಕಂಡ ಕಾಮಕಸ್ತೂರಿ ಸೊಪ್ಪನ್ನು ವಿಚಾರಿಸಿದೆ. ಈ ಸೊಪ್ಪನ್ನು ನಮ್ಮ ಕಡೆ ಹೂವಿನ ಮಧ್ಯೆ ಸೇರಿಸಿ ಕಟ್ಟುವುದು ಸಹಜ. ಆದರೆ ಇಲ್ಲಿ ? ಅದನ್ನು ಕಂತೆ ಕಂತೆಯಾಗಿ ಪೇರಿಸಿ ಇಟ್ಟಿದ್ದರು. ವಿಚಾರಿಸಿದಾಗ ಆ ವ್ಯಾಪಾರಿ ಗೂಟಕ್ಕೆ ಕಟ್ಟಿದ ಕುರಿಯೊಂದನ್ನು ತೋರಿಸಿದ. ಏನೂ ಅರ್ಥವಾಗದೆ ನಿಂತಾಗ ಕುರಿಯ ಮುಂದೆ ಒಂದು ಕಂತೆ ಸೊಪ್ಪನ್ನು  ಹಿಡಿದ. ಕುರಿಯೇನೋ ಅಷ್ಟನ್ನೂ ಖಾಲಿ ಮಾಡಿತ್ತು. ನಾವು ಕೇಳಿದ್ದೇನು ? ಇವನು ಮಾಡಿದ್ದೇನು ? ತುಂಬಾ ಹೊತ್ತಿನ ನಂತರ ಅದು ಕುರಿಗಳಿಗೆ ಹಾಕುವ ಸೊಪ್ಪೆಂದು ತಿಳಿಯಿತು. ಅಷ್ಟಾದರೂ ಹೇಳಿದನಲ್ಲಾ ಎಂದು ಮುಂದಿನ ಅಂಗಡಿಗೆ ಹೊರಟಿದ್ದೆ. ನಮ್ಮವರು ಬಿಡಬೇಕಲ್ಲ ! ತಿಂದರೆ ಏನಾಗುತ್ತೆ ? ಟ್ರೈ ಮಾಡಿ ನೋಡು ಎನ್ನುತ್ತಲೇ ಖರೀದಿಸಿಯಾಗಿತ್ತು. ತಂದು ಅಯ್ಯಂಗಾರರ ಕೊಳಂಬು ಮಾಡಿಯಾಯ್ತು . ತಿಂದವರು ಅವರೊಬ್ಬರೇ ಎಂದು ಬೇರೆಯಾಗಿ ಹೇಳಬೇಕಿಲ್ಲ. ತೊಂದರೆಯೇನೂ ಆಗಲಿಲ್ಲ . ಅವರು ಪ್ರಕೃತಿ ಚಿಕಿತ್ಸೆ ಆಯುರ್ವೇದದಲ್ಲಿ ನಂಬಿಕೆ ಇಟ್ಟವರು. ಹಾಗೆಂದು ಅವರ ಊಟ ಕೂಡಾ ಅದರಂತೆಯೇ. ಬೆಳಗಿನ ಆರಕ್ಕೆ ಮನೆ ಬಿಟ್ಟರೆ ಸಂಜೆ ಆರಕ್ಕೆ ವಾಪಸ್. ಅವರ ದಿನದ ಊಟ ಎಂದರೆ ಒಂದು ಕಪ್ ಮೊಸರು, ಕಾಲಕ್ಕೆ ತಕ್ಕ ಹಣ್ಣು, ಒಣ ಹಣ್ಣುಗಳು, ಹಸೀ ತರಕಾರಿ ಕೆಲವು ಇಷ್ಟೇ. ರಾತ್ರಿ ಮನೆ ಊಟ .

ಹೀಗೊಮ್ಮೆ ಬೆಳಗಿನ ಕಾಫಿ ಮುಗಿಸಿ ಪ್ಯಾಕ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಸೈರನ್ ಅಲರ್ಟ್ ! ಅಂದು ಸೆಪ್ಟೆಂಬರ್ 7. ನಾವಿದ್ದುದು ಅಲ್ ಕದೀರ್ ಅಪಾರ್ಟ್ಮೆಂಟ್ಸ್. ಮೊದಲ ಅಂತಸ್ತಿನಲ್ಲಿ. ಪಕ್ಕದ ಮನೆಯಲ್ಲಿದ್ದ ಮರಗಳ ಮೇಲೆ ಮನೆಗಳ ಮೇಲೆ  ಚೀರಾಡುವ ಪಾರಿವಾಳಗಳ ಸದ್ದು ಅನಾಥರಂತೆ ಪಟಪಟ ರೆಕ್ಕೆ ಬಡಿದು ಹಾರಾಡುತ್ತಿದ್ದವು. ನಮ್ಮ ಗಾಜಿನ ಕಿಟಕಿಯಿಂದ ಸ್ಪಷ್ಟವಾಗಿ ಗೋಚರ 'ಈ ಸೈರನ್ ಯುದ್ಧದ ಸೈರನ್ ಥರಾ ಇದೆ. HMT ಡಿಫೆನ್ಸ್ ನಲ್ಲಿ ಕೇಳಿದ ನೆನಪು, ಯಾವುದಕ್ಕೂ ಜೋಪಾನವಾಗಿರು' ಎಂದವರೇ ಕೆಲಸಕ್ಕೆ ಹೊರಟುಬಿಟ್ಟರು. ನನ್ನ ಮರಿಗಳು ನನ್ನ ತಾಯ್ನಾಡಿನಲ್ಲಿ ಹಿರಿಯರ  ಆಶ್ರಯದಲ್ಲಿ ಇದ್ದುದರಿಂದ ನನಗಂತೂ ಆತಂಕವಿರಲಿಲ್ಲ. ಇದ್ದ ಒಂದೇ ಬೇಸರವೆಂದರೆ ನಾನು ಆಗಷ್ಟೇ ಕಳೆದುಕೊಂಡಿದ್ದ ಕಿರಿಯ ಮಗನ ನೆನಪು. 
ಭಾಷೆ ಅರ್ಥವಾಗದಿದ್ದರೂ TV ನೋಡುತ್ತಾ ನೋಡುತ್ತಾ ಯುದ್ಧದ ಭೀಕರತೆ ತಿಳಿಯುತ್ತಾ ಬಂತು. ನಮ್ಮ ಮನೆಯ ಮುಂದಿದ್ದ ರಸ್ತೆಯಲ್ಲಿ ಪ್ರತಿದಿನ ಒಂದಲ್ಲಾ ಒಂದು ಯುದ್ಧಕ್ಕೆ ಸಂಬಂಧಿಸಿದ ಪೆರೇಡ್. ಪ್ರತಿದಿನ ಸಂಜೆ 6 ಕ್ಕೆ ಬ್ಲಾಕ್ ಔಟ್. ಕಡುಗತ್ತಲೆಯಲ್ಲಿ  ಯಾರೊಬ್ಬರು ಸಿಗರೇಟ್ ಹತ್ತಿಸಿದರೂ ಗಾಳಿಯಲ್ಲಿ ಗುಂಡುಗಳು ಓಡಾಡುವಷ್ಟು ಸೈನಿಕರ ಪಹರೆ ! ಒಮ್ಮೆ ಲೋಡೆಡ್ ಗನ್ ಹಿಡಿದ ಸೈನಿಕರು ಕಾಣಿಸಿಕೊಂಡರೆ ಮತ್ತೊಂದು ದಿನ 50 ರಿಂದ 60 ಪ್ಯಾಟನ್ ಟ್ಯಾಂಕ್ ಗಳ ದರ್ಶನ. ಎಲ್ಲವೂ ಮರಳಿನ ಬಣ್ಣದಲ್ಲಿ !! ಯುದ್ಧದ ತೀವ್ರತೆ ಹೆಚ್ಚಿದಂತೆ ಮನೆಗಳಲ್ಲಿದ್ದ 16 ವರ್ಷದ ಮೇಲ್ಪಟ್ಟ ಗಂಡು ಮಕ್ಕಳನ್ನು , ಬಲವಂತವಾಗಿ ಸೈನ್ಯಕ್ಕೆ ಎಳೆದೊಯ್ಯುವ ಪ್ರಸಂಗ ಅವರ ತಂದೆತಾಯಿಯರ ಗೋಳು ನೋಡಲಾಗುತ್ತಿರಲಿಲ್ಲ. ನಮ್ಮವರು ಡ್ಯೂಟಿಗೆ ಹೊರಟ ಕೂಡಲೇ ಯುದ್ಧದ ಕೆಲವು ಕೌತುಕಗಳನ್ನು ನೋಡಲು ಬಿಸಿಲುಮಚ್ಚಿಗೆ ಹೋಗಿ ನಿಲ್ಲುತ್ತಿದ್ದೆ. ಹಾಗೆ ನಿಂತಾಗ ಒಮ್ಮೆ ಒಂದು ಸಿಲಿಂಡರ್ ಮಾದರಿಯ ಒಂದಿಂಚಿನ ಲೋಹದ ತುಂಡೊಂದು ನನ್ನ ಬಲಭುಜದ ಪಕ್ಕ ಹಾಯ್ದು ಟೆರೇಸ್ ಮೂಲೆಯ ಗೋಡೆಯ ಮೇಲೆ ಬಿತ್ತು. ಕಣ್ಬಿಟ್ಟು ನೋಡುವಷ್ಟರಲ್ಲಿ ಗೋಡೆಯ ದೊಡ್ಡ ತುಂಡೊಂದು ಮುರಿದು ಭೂಮಿ ಸೇರಿಯಾಗಿತ್ತು. ನಡೆದದ್ದೇನು ? ಎಂದು ಯೋಚಿಸಿದ್ದೇ ಆಮೇಲೆ. ಆ ಲೋಹದ ತುಂಡನ್ನು ಬಹಳ ದಿನ ಮಕ್ಕಳಿಗೆ ತೋರಿಸಲೆಂದು ಇಟ್ಟಿದ್ದೆ. ವಾಪಸ್ ಹೋಗುವಾಗ ಫ್ಲೈಟ್ ನಲ್ಲಿ ಸಮಸ್ಯೆ ಆಗುವುದೆಂದು ಬಿಸಾಕಿದ್ದೂ ಆಯ್ತು. 
ವಾರ ಕಳೆಯುತ್ತಿದ್ದಂತೆ ಬಾಂಬ್ ಬ್ಲಾಸ್ಟ್ !! ಕೂಡಲೇ ಟೆರೇಸ್ ಗೆ ಓಡಿದೆ. ರಷ್ಯಾದ ಯುದ್ಧ ವಿಮಾನವೊಂದು ಪೆಟ್ರೋಲ್ ಬಂಕ್ ಮೇಲೆ ಧಾಳಿ ನಡೆಸಿತ್ತು. ಕಾಲ್ಗಳಿಗೆ ದೂರವಾದರೂ ದೃಷ್ಟಿಗೆ ಎಟುಕುತ್ತಿದ್ದ ಆ ಪೆಟ್ರೋಲ್ ಬಂಕ್ ಹತ್ತು ದಿನವಾದರೂ ಕಳೆಗುಂದದೆ ಅಗ್ನಿದೇವನೇ ಪ್ರತ್ಯಕ್ಷವಾದಂತೆ ಹೊಂಬಣ್ಣದಲ್ಲಿ ನಿಗಿನಿಗಿ ಉರಿಯುತ್ತಲೇ ಇತ್ತು. ಆ ರೀತಿಯ ಅನೇಕ ಪೆಟ್ರೋಲ್ ಬಂಕ್ ಗಳು ಒಂದೆರಡು ತಿಂಗಳಲ್ಲಿ ಸಾಲು ಸಾಲಾಗಿ ಉರಿದಿದ್ದವು. ತೈಲ ನಿಕ್ಷೇಪದ ಆಧಾರಗಳು ಬರಿದಾಗಿ ನಿಂತಿದ್ದವು. ಆ ದೇಶದ ಮೂಲಾಧಾರ ಸೊರಗಿತ್ತು. ನಿತ್ಯವೂ ಒಂದು ಯುದ್ಧದ ವಿಚಾರ ಹೇಳುತ್ತಿದ್ದರು. ಭಾರತದ ವೈದ್ಯರುಗಳನ್ನು ಅಪಹರಿಸಿ ಕಣ್ಣುಗಳನ್ನು ಕಟ್ಟಿ ಗಾಯಾಳುಗಳ ಔಷಧೋಪಚಾರ ಮುಗಿಸಿ ಕ್ಷೇಮವಾಗಿ ವಾಪಸ್ ತರುತ್ತಿದ್ದುದು, ಆಫೀಸ್ ಗೆ ಹೋಗುವ ಮಾರ್ಗ ಮಧ್ಯೆ ಸೈರನ್ ಬಂದಾಗ ಅಲ್ಲಲ್ಲಿ ತೋಡಿದ್ದ ಟ್ರೆಂಚ್ ಗಳಿಗೆ ತಾವೆಲ್ಲಾ ಧುಮುಕುತ್ತಿದ್ದ ಸಮಾಚಾರ... ಹೀಗೆ. 
ಭಾರತದಿಂದ ಬಂದ ಬಹುಮಂದಿಗೆ ಮಕ್ಕಳೊಡನೆ ತಾಯ್ನಾಡಿಗೆ ಹಿಂದಿರುಗುವ ತವಕ. ಒಂದೆರಡು ಮೀಟಿಂಗ್ ನಡೆಸಿದ ಮೇಲೆ ವಾಪಸ್ ಹೊರಡುವ ನಿರ್ಧಾರವಾಯ್ತು .  ಹೊರಡುವ ದಿನ ನಿರ್ಧಾರವಾಗುತ್ತಿದ್ದಂತೆ ಆದಷ್ಟೂ ಕಮ್ಮಿ ಸಾಮಾನುಗಳನ್ನು ಪ್ಯಾಕ್ ಮಾಡಿದ್ದಾಯ್ತು. ನಮ್ಮ ನೆಲಜಲ, ಜನ ಕಾಣುವವರೆಗೆ ಬದುಕುಳಿಯಲು ಬೇಕಾದ, ಆಹಾರ ಪಾನೀಯಗಳ ಸಂಗ್ರಹಣೆಯೂ ಆಯ್ತು. ಎರಡು ಫ್ಲಾಸ್ಕ್ ನಲ್ಲಿ ಹಾಲು , ಬಿಸಿನೀರು ಕುಡಿಯುವ ನೀರಿನ ಬಾಟಲಿಗಳು, ಬ್ರೆಡ್, ಬಿಸ್ಕೆಟ್, ನೆಸ್ಕೆಫೆ , ಬೋರ್ನ್ವಿಟ, ಸಕ್ಕರೆ, ಹಣ್ಣುಗಳು, ಮತ್ತಷ್ಟು ಚಪಾತಿ, ಚಟ್ನಿಪುಡಿ, ಇತ್ಯಾದಿ .
ಮುಂಗಡವಾಗಿ ಯಾವ ಟ್ರಾನ್ಸ್ಪೋರ್ಟೆಶನ್ ಸಹ ಬುಕ್ ಮಾಡಿರಲಿಲ್ಲ. ಮಾಡಲು ಸಾಧ್ಯವೂ ಇರಲಿಲ್ಲ. ಬಾಗ್ದಾದ್ ನಲ್ಲಿ ನಫರತ್ ಎಂದು ಕರೆಯಲ್ಪಡುವ  ವಾಹನವೊಂದರಲ್ಲಿ ನಮ್ಮ ಪ್ರಯಾಣ ಬೆಳಿಗ್ಗೆ 6 ಕ್ಕೆ ಆರಂಭವಾಯ್ತು. ಕುವೈಟ್ ವರೆಗೆ, ಸಾವಿರ ಮೈಲುಗಳ ದಾರಿಯನ್ನು ಸಾಗಿಸಬೇಕಿತ್ತು. ರಸ್ತೆಗಳು ವಿಶಾಲವಾದ್ದರಿಂದ, ಮರುಭೂಮಿಯ ನಡುವಿನ ಉಬ್ಬುತಗ್ಗಿಲ್ಲದ ಅಂಕುಡೊಂಕು ಇಲ್ಲದ ನೇರ ರಸ್ತೆಯಾದ್ದರಿಂದ ವೇಗಕ್ಕೆ ಅಡ್ಡಿ ಇರಲಿಲ್ಲ. ಒಂದೆರಡು ಹಳ್ಳಿಗಳನ್ನು ದಾಟಿದ ಮೇಲೆ , ಇದ್ದಕ್ಕಿದ್ದಂತೆ ನಮ್ಮ ವ್ಯಾನ್ ಕಿಟಕಿಯ ಪಕ್ಕದಲ್ಲೇ ಅತಿ ಕೆಳಗಿನ ಲೆವೆಲ್ ನಲ್ಲಿ ಯುದ್ಧ ವಿಮಾನವೊಂದು ಎಲ್ಲೋ ಬಾಂಬ್ ಸಿಡಿಸಿ ರೇಡಾರ್ ದೃಷ್ಟಿಗೂ ನಿಲುಕದಷ್ಟು ಕೆಳಗಿನಿಂದ , ತಪ್ಪಿಸಿಕೊಂಡು ಕ್ಷಣಾರ್ಧದಲ್ಲಿ ಮಿಂಚಿ ಮಾಯವಾಯ್ತು. ಎಲ್ಲರಿಗೂ ಒಂದರ್ಧ ಗಂಟೆ ತಳಮಳ ಕಾಣದ ದೈವಕ್ಕೊಂದು ನಮಸ್ಕಾರ ಹಾಕಿ ರಸ್ತೆ ಸಾಗಿಸುತ್ತಿದ್ದಂತೆ ಹಿಂಡು ಹಿಂಡಾಗಿ ಒಂಟೆಗಳು. ಎಲ್ಲೆಲ್ಲಿ ನೋಡಿದರೂ ಮರಳು, ಮರಳು, ಮರಳು !!! ಈ ಅನುಭವವೂ ಚೆನ್ನಾಗಿಯೇ ಇತ್ತು.  
ನಾವು ನ್ಯೂಟ್ರಲ್ ಬಾರ್ಡರ್ ಸೇರಿದಾಗ ಸಂಜೆ 6. ನಮ್ಮನ್ನು ಹೊತ್ತು ತಂದ ವ್ಯಾನ್, ನಮ್ಮನ್ನೂ ಸಾಮಾನುಗಳನ್ನೂ ಇಳಿಸಿ ಹೊರಟು ಹೋಯಿತು. ಮರಳು ಗಾಡಿನ ಮಧ್ಯೆ ! ಅಲ್ಲೇನಿದೆ ? ಒಂದು ಶೀಟ್ ಹಾಕಿದ್ದ ದಪ್ಪ ಬೀಗ ಜಡಿದಿದ್ದ ರೂಂ ಎನ್ನಬಹುದಾದ ಕಟ್ಟಡ ! ಮತ್ತೇನೂ ಇಲ್ಲ. ಸ್ವಲ್ಪ ಸುಧಾರಿಸಿಕೊಂಡು ಕಾಫಿ ಕುಡಿದು ಆಕಾಶದತ್ತ ನೋಡುತ್ತಿದ್ದಂತೆ, ಸಹಸ್ರಾರು ಕೆಂಪು ಮಿಣುಕು ಹುಳುಗಳಂತೆ anti ಏರ್ ಕ್ರ್ಯಾಫ್ಟ್ಸ್ ಹಾರಿಸಿದ ಟ್ರೇಸರ್ ಬುಲೆಟ್ ಗಳು ತುಂಬಿಕೊಂಡವು. ಕ್ಷಣಾರ್ಧದಲ್ಲಿ ಮುಗಿಲೆತ್ತರಕ್ಕೆ ಪೆಟ್ರೋಲ್ ಬಂಕ್ ಗಳ ಮೇಲೆ ನಡೆಸಿದ್ದ ಧಾಳಿಯಿಂದ ಅಗ್ನಿದರ್ಶನ !! ಬಹು ದೂರವಿದ್ದರೂ, ಚೆನ್ನಾಗಿ ನೋಡಬಹುದಿತ್ತು. ಧಾಳಿಗೀಡಾದ ನಗರ 'ಬಾಸ್ರಾ' !! ಇರಾಕ್ ದೇಶದ ಪ್ರಮುಖ ಬಂದರು ಹಾಗೂ ಆರ್ಥಿಕವಾಗಿ ಮುಂದುವರೆದಿದ್ದ ನಗರ ! ಕಣ್ಮುಂದೆಯೇ ನಿರ್ನಾಮವಾಗಿತ್ತು. ರಾತ್ರಿ ಹಸಿವಾದಾಗ ಒಂದಿಷ್ಟು ತಿಂದು ಎರಡು ದೊಡ್ಡ ಪೆಟ್ಟಿಗೆಗಳನ್ನು ಜೋಡಿಸಿಕೊಂಡು ದುಪ್ಪಟಿ ಹೊದ್ದು ಮಲಗಿದೆವು. ನಮ್ಮ ಜೀವಮಾನದಲ್ಲಿ ಆಕಾಶದ ಕೆಳಗೆ ಭೂಮೀನೆ  ಹಾಸಿಗೆ ಆಕಾಶವೇ ಕಂಬಳಿ ಅಂತಾ ಮಲಗಿದ್ದು ಅದೇ ಮೊದಲು  !!
ಬೆಳಿಗ್ಗೆ ನಾಲ್ಕಕ್ಕೆ ಎದ್ದು ಸಿಕ್ಕಿದಲ್ಲಿ ಪ್ರಾತರ್ವಿಧಿ ಮುಗಿಸಿ ಕುವೈಟ್ ನಿಂದ ಬಂದ ಬಸ್ಸೊಂದರಲ್ಲಿ ಎಲ್ಲರೂ ಕುವೈಟ್ ಏರ್ಪೋರ್ಟ್ ಗೆ ಹೊರಟೆವು. ಯಾವುದೂ ಫ್ಲೈಟ್ ಬುಕ್ ಆಗದ ಕಾರಣ ಅಲ್ಲೇ ಟಿಕೆಟ್ ಪಡೆದು ಚಾರ್ಟರ್ಡ್ ಪ್ಲೇನ್ ನಲ್ಲಿ ಹೊರಟಿದ್ದು , ಬಾಂಬೆಗೆ. ಸಮಯವಿದ್ದ ಕಾರಣ ಅಲ್ಲಲ್ಲೇ ಸುತ್ತಾಡುತ್ತಿದ್ದೆವು. ಈ ರೀತಿ ಯುದ್ಧದ ಸಮಯದಲ್ಲಿ ಬಂದವರಿಗೆ ಸರ್ದಾರ್ಜೀಗಳ ಸಂಸ್ಥೆಯೊಂದು ಪೂರಿ ಪಲ್ಯಗಳನ್ನು ನೀಟಾಗಿ ಪ್ಯಾಕ್ ಮಾಡಿ ಎಲ್ಲರಿಗೂ ಉಚಿತವಾಗಿ ಕೊಡುತ್ತಿದ್ದರು. ನಮ್ಮ ಬಳಿ ನಾವು ತಂದ ತಿಂಡಿ ತೀರ್ಥವಿದ್ದ ಕಾರಣ ನಮಗಾಗಿ ಪೂರಿ ಪಲ್ಯ ತೆಗೆದುಕೊಂಡು ಮಿಕ್ಕ ಮಕ್ಕಳಿಗೆ ಕೊಟ್ಟಿದ್ದಾಯ್ತು. ನಾವು ಏರಿದ್ದು ಬಾಂಬೆಗೆ ಎಂದಾದರೂ ತಲುಪಿದ್ದು ಡೆಲ್ಲಿಗೆ !!   
ಒಟ್ಟಿನಲ್ಲಿ ತಾಯ್ನಾಡಿಗೆ ತಲುಪಿದ್ದಾಗಿತ್ತು. ಡೆಲ್ಲಿಯ ಹೋಟೆಲ್ ರಣಜಿತ್ ನಲ್ಲಿ ನಮಗೆ ಇರಲು ಅವಕಾಶವಿತ್ತು. ಅಲ್ಲಿ ಸ್ನಾನಪಾನ ಊಟ ಮುಗಿಸಿ ವಿಮಾನ ಏರಿ ಬೆಂಗಳೂರು ಮುಟ್ಟಿದಾಗ ರಾತ್ರಿ 8-30. ಯುದ್ದದ ವಿಚಾರ ಕೇಳಲು ನನ್ನ ಘನ ಸಂಸಾರವೆಲ್ಲಾ  ರೇಡಿಯೋ ಸುತ್ತ ಕುಳಿತಿದ್ದಾಗ ನಾವು ಮನೆ ಸೇರಿದ್ದು ಎಲ್ಲರಿಗೂ ಆಶ್ಚರ್ಯ ಸಂತೋಷ !!..

1 comment:

  1. ಕಾಣದ ದೈವ ಕೈಬಿಡೋದಿಲ್ಲ ರೋಮಾಂಚನವಾಗುತ್ತೆ !!

    ReplyDelete